×
Ad

5 ವರ್ಷಗಳಲ್ಲಿ ಏನು ಮಾಡಿದ್ದೀರಿ ಎಂದು ಕೇಳಿದ್ದಕ್ಕೆ 'ಭಾರತ್ ಮಾತಾಕಿ ಜೈ' ಎಂದ ಬಿಜೆಪಿ ಸಂಸದ !

Update: 2019-05-04 17:30 IST

ಹೊಸದಿಲ್ಲ, ಮೇ 4: ‘ಭಾರತ್ ಮಾತಾ ಕಿ ಜೈ’ ಘೋಷಣೆಯ ಮೂಲಕ ಕಠಿಣ ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸಬಹುದಾಗಿದೆ ಎಂದು ಬಿಜೆಪಿ ಅಭ್ಯರ್ಥಿಗಳು ಹಲವು ಬಾರಿ ಸಾಬೀತು ಪಡಿಸಿದ್ದಾರೆ.

ಇದಕ್ಕೆ ಮತ್ತೊಂದು ಉದಾಹರಣೆ ಪಶ್ಚಿಮ ದಿಲ್ಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಪರ್ವೇಶ್ ಸಾಹಿಬ್ ಸಿಂಗ್. ತಮ್ಮ ಕ್ಷೇತ್ರದಲ್ಲಿನ ಒಂದು ಗ್ರಾಮದಲ್ಲಿ ಅವರು ಪ್ರಚಾರ ಭಾಷಣ ನಡೆಸುತ್ತಿದ್ದಾಗ ಸಭಿಕರಲ್ಲಿದ್ದ ಒಬ್ಬ ಯುವಕ ಎದ್ದು ನಿಂತು ಕಳೆದ ಐದು ವರ್ಷಗಳಲ್ಲಿ ನೀವೇನು ಮಾಡಿದ್ದೀರಿ ಎಂದು ಪರ್ವೇಶ್ ಅವರನ್ನು ಪ್ರಶ್ನಿಸಿದ್ದ. ಈ ಘಟನೆಯ ವೀಡಿಯೋದಲ್ಲಿ ಕಾಣುತ್ತಿರುವಂತೆ ಈ ಪ್ರಶ್ನೆ ಕೇಳಿ ಪರ್ವೇಶ್ ಅರೆ ಕ್ಷಣ ಗಲಿಬಿಲಿಗೊಂಡಿದ್ದರು. ಏನು ಉತ್ತರಿಸಬೇಕೆಂದು ತಿಳಿಯದೆ ಸುಮ್ಮನೆ ಏನನ್ನೋ ಅವರು ಮಾತನಾಡಿದಾಗ ನೆರೆದಿದ್ದ ಜನರು ಉತ್ತರ ಬೇಕೆಂದು ಒತ್ತಾಯಿಸುತ್ತಿದ್ದಂತೆಯೇ ``ಭಾರತ್ ಮಾತಾ ಕಿ ಜೈ'' ಘೋಷಣೆ ಕೂಗುವಂತೆ ಅವರು ಸಭಿಕರಲ್ಲಿ ಹೇಳುತ್ತಾರೆ.

ಉತ್ತರ ನೀಡುವುದನ್ನು ತಪ್ಪಿಸಲು ಬಿಜೆಪಿ ನಾಯಕರು ಈ ರೀತಿ ಮಾಡುತ್ತಿದ್ದಾರೆಂಬುದಕ್ಕೆ ಉದಾಹರಣೆಯಾಗಿ ಹಲವು ಸಾಮಾಜಿಕ ಜಾಲತಾಣಿಗರು ಈ ವೀಡಿಯೋ ಶೇರ್ ಮಾಡಿದ್ದಾರೆ.

ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸಲು ಬಿಜೆಪಿಗರು ಭಾರತ್ ಮಾತಾ ಕಿ ಜೈ ಘೋಷಣೆಗೆ ಮೊರೆ ಹೋಗಿರುವುದು ಇದೇ ಮೊದಲ ಬಾರಿಯಲ್ಲ. ಪತ್ನಿ ಕಿರಣ್ ಖೇರ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ನಟ ಅನುಪಮ್ ಖೇರ್ ಅವರಲ್ಲಿ ಅವರ ಪತ್ನಿಯ ವಿರುದ್ಧ ಇರುವ ಆರೋಪಗಳ ಬಗ್ಗೆ ಕೇಳಿದಾಗ ಅನುಪಮ್ ಅವರು ಸುಲಭವಾಗಿ ``ಭಾರತ್ ಮಾತಾ ಕಿ ಜೈ'' ಎಂದು ಬಿಟ್ಟಿದ್ದರು.

ದೇಶಪ್ರೇಮವನ್ನು ಸೂಚಿಸಲು ಬರೀ ಘೋಷಣೆಗಳನ್ನು ಕೂಗುವುದರಿಂದ ನಿಜವಾದ ಸಮಸ್ಯೆಗಳನ್ನು ಅಡಗಿಸಿಡಲು ಸಾಧ್ಯವಿಲ್ಲವೆಂಬುದನ್ನು ಬಿಜೆಪಿ ಅರಿತು  ಪ್ರಶ್ನೆಗಳಿಗೆ ಸೂಕ್ತ ಉತ್ತರನೀಡಲು ಪ್ರಯತ್ನಿಸಬೇಕೆಂದು ಹಲವು ಟ್ವಿಟ್ಟರಿಗರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News