×
Ad

ಮೀನುಗಾರರ ನಾಪತ್ತೆ ಪ್ರಕರಣ: ನ್ಯಾಯಾಂಗ ತನಿಖೆಗೆ ಸಿಪಿಎಂ ಒತ್ತಾಯ

Update: 2019-05-04 20:50 IST

ಉಡುಪಿ, ಮೇ 4: ನಾಲ್ಕೂವರೆ ತಿಂಗಳುಗಳಿಂದ ನಾಪತ್ತೆಯಾಗಿದ್ದ ಏಳು ಮಂದಿ ಮೀನುಗಾರರು ಸಹಿತ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಮೇ1ರಂದು ಪತ್ತೆಯಾಗಿದ್ದು, ಲೋಕಸಭಾ ಚುನಾವಣಾ ಕಾರಣಕ್ಕಾಗಿ ಇದರ ಮಾಹಿತಿಯನ್ನು ಮರೆ ಮಾಚಲಾಗಿದೆ ಎಂದು ಆರೋಪಿಸಿರುವ ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ, ಕೂಡಲೇ ಈ ಬಗ್ಗೆ ನ್ಯಾಯಾಂಗ ತನಿಖೆಗೆ ರಾಜ್ಯ ಸರಕಾರ ಆದೇಶಿಸಬೇಕು ಎಂದು ಒತ್ತಾಯಿಸಿದೆ.

ಈ ಬೋಟಿನಲ್ಲಿದ್ದ ಮೀನುಗಾರರು ಬದುಕಿ ಉಳಿದಿರುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಸೇರಿದ ಉಡುಪಿ ಶಾಸಕರು ಭಾರತೀಯ ನೌಕಾಪಡೆಯ ಐ.ಎನ್‌ಎಸ್ ಕೊಚ್ಚಿನ್ ನೌಕೆಯೆ ಮೀನುಗಾರರ ದೋಣಿಗೆ ಹೊಡೆದು ಮುಳುಗಿಸಿರುವ ಸಂಶಯ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಕರಾವಳಿಯಿಂದ ಕೇವಲ 33ಕಿ.ಮಿ. ದೂರದಲ್ಲಿ ಬೋಟು ಪತ್ತೆಯಾಗಿದೆ. ಡಿ.15ರಿಂದ ಇದುವರೆಗೆ ಅರಬೀ ಸಮುದ್ರದಲ್ಲಿ ಯಾವುದೇ ಹವಾಮಾನ ವೈಪರೀತ್ಯ ಆದ ವರದಿ ಆಗಿಲ್ಲ. ಅಂದರೆ ಬೋಟು ಹಾಳಾಗಿ ಅಥವಾ ಹಿಡಿತ ತಪ್ಪಿಮುಳುಗಿದರೆ ಲೈಫ್ ಜಾಕೆಟ್ ಧರಿಸಿ ಕೆಲವರಾದರೂ ಬದುಕಿ ಉಳಿಯುವ ಸಾಧ್ಯತೆ ಇತ್ತು.

ದೋಣಿ ಪತ್ತೆಯಾಗಿರುವುದು ಭಾರತದ ಸಾಗರದ ಗಡಿಯೊಳಗೆ ಆಗಿರುವುದರಿಂದ ಇದು ಶತ್ರು ಪಡೆಯ ಕೆಲಸ ಅಲ್ಲ ಎಂದೇ ಹೇಳಬಹುದು. ನಮ್ಮದೇ ನೌಕಾ ಪಡೆ ಧಿಡೀರ್ ದಾಳಿ ನಡೆಸಿ ಬೋಟನ್ನು ಮುಳುಗಿಸಿರುವ ಸಾಧ್ಯತೆ ಹೆಚ್ಚು ಎಂದು ವ್ಯಕ್ತಾಗುತ್ತದೆ ಎಂದು ಸಿಪಿಎಂ ಆರೋಪಿಸಿದೆ.

ಎ.29ರಂದು ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿ ಮೇ1ರಂದು ಅವಶೇಷಗಳು ಕಾಣಿಸಿದವು ಎಂದು ಅಲ್ಲಿಗೆ ತೆರಳಿದ್ದ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ. ಸೋನಾರ್ ತಂತ್ರಜ್ಞಾನದ ಮೂಲಕ 3 ದಿನಗಳಲ್ಲಿ ಅವಶೇಷಗಳ ಪತ್ತೆ ಸಾಧ್ಯವಾಗುವುದಾದರೆ 130 ದಿನಗಳಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂದು ಬಿಜೆಪಿ ಮುಖಂಡರು ಮತ್ತು ಕೇಂದ್ರ ಸರಕಾರ ಉತ್ತರಿಸಬೇಕಾಗಿದೆ ಎಂದು ಸಿಪಿಐಎಂ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News