×
Ad

ತಪ್ಪೊಪ್ಪಿಕೊಂಡು, ಮೀನುಗಾರ ಕುಟುಂಬಕ್ಕೆ ಪರಿಹಾರ ನೀಡಿ: ನೌಕಾಪಡೆಗೆ ಪ್ರಮೋದ್ ಮಧ್ವರಾಜ್ ತಾಕೀತು

Update: 2019-05-04 21:46 IST

ಉಡುಪಿ, ಮೇ 4: ನೌಕಾಪಡೆಗೆ ಸೇರಿದ ಐಎನ್‌ಎಸ್ ಕೊಚ್ಚಿನ್ ನೌಕೆಯೇ ಮಲ್ಪೆಯ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟಿಗೆ ಢಿಕ್ಕಿ ಹೊಡೆದು ಮುಳುಗಿಸಿರುವುದು ಖಚಿತವಾಗಿದ್ದು, ಈ ಬಗ್ಗೆ ಮೂರು ತಿಂಗಳಿನಿಂದ ಮೀನುಗಾರ ಕುಟುಂಬವನ್ನು ವಂಚಿಸಿರುವುದಕ್ಕೆ ಕ್ಷಮೆಯಾಚಿಸಿ ತಲಾ 25 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು ಎಂದು ಮಾಜಿ ಮೀನುಗಾರಿಕಾ ಸಚಿವ ಹಾಗೂ ಮೀನುಗಾರ ಮುಖಂಡ ಪ್ರಮೋದ್ ಮದ್ವರಾಜ್ ನೌಕಾಪಡೆಗೆ ತಾಕೀತು ಮಾಡಿದ್ದಾರೆ.

ಈ ಬಗ್ಗೆ ನಾನು ಶೀಘ್ರವೇ ನೌಕಾಪಡೆಯ ಸುಪ್ರೀಂ ಕಮಾಂಡೆಂಟ್ ಆಗಿರುವ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ಮುಖ್ಯಮಂತ್ರಿಗಳು ಹಾಗೂ ದೇಶದ ರಕ್ಷಣಾ ಸಚಿವೆಗೆ ಪತ್ರ ಬರೆದು ಒತ್ತಾಯಿಸಲಿದ್ದೇನೆ. ನಿರ್ದಿಷ್ಟ ಸಮಯದ ಬಳಿಕವೂ ತಪ್ಪೊಪ್ಪಿಗೆ ಹಾಗೂ ಪರಿಹಾರ ಸಿಗದಿದ್ದರೆ, ಪ್ರಕರಣದ ಕುರಿತು ಬಡ ಮೀನುಗಾರರಿಗೆ ನ್ಯಾಯ ದೊರಕಿಸಲು ಸುಪ್ರಿಂ ಕೋರ್ಟ್‌ನ ಮೆಟ್ಟಿಲೇರಲು ಸಿದ್ಧನಿದ್ದೇನೆ. ಮಾತ್ರವಲ್ಲದೆ ಅಗತ್ಯ ಬಿದ್ದರೆ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ವಿರುದ್ಧವೂ ಪ್ರಕರಣ ದಾಖಲಿಸುತ್ತೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್, ನೌಕಾಪಡೆಗೆ ಸೇರಿದ ಐಎನ್‌ಎಸ್ ಕೊಚ್ಚಿನ್ ಹಡಗು ಢಿಕ್ಕಿ ಹೊಡೆದ ಪರಿಣಾಮವೇ ಸುವರ್ಣ ತ್ರಿಭುಜ ಬೋಟ್ ಸಮುದ್ರದಲ್ಲಿ ಮುಳುಗಿದ್ದು ಇದನ್ನು ಮುಚ್ಚಿಡಲಾಗಿದೆ. ನೌಕಾ ಪಡೆಯವರು ಅಕಸ್ಮಿಕವಾಗಿ ನಡೆದಿರಬಹುದಾದ ಅಪಘಾತದ ಕುರಿತು ಆಗಲೇ ಮಾಹಿತಿ ನೀಡಿದ್ದರೆ ಇಂಥ ಪ್ರಸಂಗವೇ ಎದುರಾಗುತ್ತಿರಲಿಲ್ಲ ಎಂದರು.

2018ರ ಡಿ.15-16ರ ರಾತ್ರಿ ನಡೆದ ಈ ಅಪಘಾತದ ಬಗ್ಗೆ, ಸುವರ್ಣ ತ್ರಿಭುಜ ಬೋಟು ಮುಳುಗಿದ ಬಗ್ಗೆ ನೌಕಾ ಪಡೆಗೆ ಮಾಹಿತಿ ಇರಲಿಕ್ಕಿಲ್ಲ. ಆದರೆ ಡಿ.22ರಂದು ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಬೋಟು ಮತ್ತು ಮೀನುಗಾರರ ನಾಪತ್ತೆ ಪ್ರಕರಣ ದಾಖಲಾಗಿ ಅದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಬಳಿಕವಾದರೂ ನೌಕಾ ಸೇನೆ ಇದನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೀನುಗಾರ ಸಮುದಾಯದ ಓಟು ಕಳೆದುಕೊಳ್ಳುವ ಭೀತಿಯಿಂದ ಸುದ್ದಿಯನ್ನು ಬಹಿರಂಗ ಪಡಿಸದೇ ಮತ್ತೂ ಹುಡುಕುವ ನಾಟಕವಾಡಿದ್ದು ಮೀನುಗಾರರಿಗೆ ಬಗೆದ ದ್ರೋಹವಾಗಿದೆ. ಇದು ನಿಜವಾಗಿಯೂ ದೇಶದ್ರೋಹ ಕೆಲಸ ಎಂದು ಅವರು ಹೇಳಿದರು.

ಇದೀಗ ನೌಕಾ ಪಡೆ ಮೃತ 7 ಮೀನುಗಾರರ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು ಮಾತ್ರವಲ್ಲದೆ ಸುವರ್ಣ ತ್ರಿಭುಜ ಮೀನುಗಾರಿಕೆ ದೋಣಿಯ ಇನ್ಯುರೆನ್ಸ್ ಕ್ಲೇಮ್ ಬಳಿಕದ ಬಾಕಿ ಉಳಿದ ಮೊತ್ತದ ಪರಿಹಾರವನ್ನು ನೀಡಬೇಕು. ಇವೆಲ್ಲವನ್ನೂ ನೌಕಾಪಡೆಯೇ ನೀಡಬೇಕು ಎಂದವರು ತಾಕೀತು ಮಾಡಿದರು.

ಒಂದು ವೇಳೆ ಪರಿಹಾರ ನೀಡಲು ಹಾಗೂ ತಪ್ಪೊಪ್ಪಿಕೊಳ್ಳಲು ನೌಕಾಪಡೆ ಒಪ್ಪಿಕೊಳ್ಳದಿದ್ದಲ್ಲಿ ನೌಕಾಪಡೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ನುರಿತ ವಕೀಲರನ್ನು ನೇಮಿಸಿಕೊಂಡು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತೇನೆ. ಈ ಪ್ರಕರಣದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಜವಾಬ್ದಾರರಾಗಿದ್ದು, ಅವರು ಕಾನೂನಿಗಿಂತ ದೊಡ್ಡವರಲ್ಲ. ಹೀಗಾಗಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲು ಸಿದ್ಧ ಎಂದು ಪ್ರಮೋದ್ ನುಡಿದರು.

ಡಿ.14ರಿಂದ 16ರ ನಡುವಿನ ಅವಧಿಯಲ್ಲಿ ಐಎನ್‌ಎಸ್ ಕೊಚ್ಚಿನ್ ಸಾಗಿರುವ ಮಾರ್ಗದ ದಾಖಲೆಯನ್ನು ಪರಿಶೀಲಿಸಿದಾಗ ಅದು 15ರ ರಾತ್ರಿ ಮಹಾರಾಷ್ಟ್ರದ ಮಾಲ್ವಾನ್ ಸಮುದ್ರದಲ್ಲಿರುವುದು ಹಾಗೂ ಅದೇ ಹೊತ್ತಿನಲ್ಲಿ ಸುವರ್ಣ ತ್ರಿಭುಜ ಬೋಟಿನಿಂದ ಕೊನೆಯ ಸಂದೇಶ ಅಲ್ಲಿಂದಲೇ ಬಂದಿರುವುದು ಸಾಬೀತಾಗಿದೆ. ಇದರಿಂದ ಐಎನ್‌ಎಸ್ ಕೊಚ್ಚಿನ್ ಹಡಗು ಸುವರ್ಣ ತ್ರಿಭುಜಕ್ಕೆ ಢಿಕ್ಕಿ ಹೊಡೆದಿರುವುದು ಖಚಿತ. ಅಲ್ಲದೇ ಡಿ.16-17ರ ಆಸುಪಾಸಿನಲ್ಲಿ ಮಹಾರಾಷ್ಟ್ರ ಸಮುದ್ರದಲ್ಲಿ ಯಾವುದಾದರೂ ಬೋಟಿಗೆ ಹಾನಿಯಾಗಿದೆಯೇ, ಮುಳುಗಿದೆಯೇ ಎಂದು ವಯರ್‌ಲೆಸ್ ಸಂದೇಶದಲ್ಲಿ ನೌಕಾಪಡೆ ವಿಚಾರಿಸಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ ಎಂದರು.

ಹೀಗೆ ನೌಕಾ ಪಡೆ ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿದ ಬಳಿಕವಾದರೂ ನಿಜವಾದ ಸಂಗತಿಯನ್ನು ಬಹಿರಂಗ ಪಡಿಸದೇ ಅದನ್ನು ಮುಚ್ಚಿಟ್ಟು ನಾಟಕ ವಾಡಿದೆ. ಇದನ್ನು ನಾನು ಸಮಸ್ತ ಮೀನುಗಾರರ ಪರವಾಗಿ ಖಂಡಿಸುತ್ತೇನೆ ಎಂದರು. ಹೀಗಾಗಿ ನೌಕಾ ಪಡೆಯ ಮುಂದೆ ನನ್ನ ಕೆಲವು ಬೇಡಿಕೆಗಳಿವೆ.

ಐಎನ್‌ಎಸ್ ಕೊಚ್ಚಿನ್, ಸುವರ್ಣ ತ್ರಿಭುಜ ಬೋಟಿಗೆ ಢಿಕ್ಕಿ ಹೊಡೆದು ಮುಳುಗಿಸಿರುವುದರಿಂದ ಬೋಟಿಗೆ ಸಂಪೂರ್ಣ ಪರಿಹಾರ ನೀಡಬೇಕು. ಈ ಬಗ್ಗೆ ನೌಕಾಪಡೆ ತಪ್ಪೊಪ್ಪಿಕೊಂಡು, ಏಳು ಮಂದಿ ಮೀನುಗಾರರ ಕುಟುಂಬದವರಿಗೂ ತಲಾ 25 ಲಕ್ಷ ರೂ.ಪರಿಹಾರ ನೀಡಬೇಕು. ಆಗ ಐಎನ್‌ಎಸ್ ಕೊಚ್ಚಿನ್‌ನಲ್ಲಿದ್ದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬೇಡಿಕೆಗೆ ಒಪ್ಪದಿದ್ದರೆ ಬಡ ಮೀನುಗಾರ ಕುಟುಂಬಕ್ಕೆ ನ್ಯಾಯ ದೊರಕಿಸಲು ನಾನು ಸುಪ್ರೀಂ ಕೋರ್ಟಿನ ಮೆಟ್ಟಲೇರುತ್ತೇನೆ ಎಂದು ಪ್ರಮೋದ್ ಹೇಳಿದರು.

ಈ ಬಗ್ಗೆ ಎಲ್ಲಾ ದಾಖಲೆಗಳನ್ನು ನಾನು ಸಂಗ್ರಹಿಸಿದ್ದು, ಅದನ್ನು ಕೋರ್ಟಿನ ಮುಂದಿರಿಸಿ ನ್ಯಾಯಾಂಗ ತನಿಖೆ ಹಾಗೂ ಪರಿಹಾರಕ್ಕೆ ಆಗ್ರಹಿಸುತ್ತೇನೆ ಎಂದರು. ಈ ನಡುವೆ ತನಗೆ ದೊರೆತ, ಆದರೆ ದೃಢ ಪಡದ ಮಾಹಿತಿಯೊಂದರಲ್ಲಿ ಬೋಟಿನಲ್ಲಿದ್ದ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದು, ಅವುಗಳನ್ನು ಬಹಿರಂಗ ಪಡಿಸದೇ ಮುಚ್ಚಿ ಹಾಕಲಾಗಿದೆ ಎಂದು ಮಹಾರಾಷ್ಟ್ರದ ಮೀನುಗಾರರು ತಿಳಿಸಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗಿದೆ ಎಂಬುದು ತನ್ನ ಊಹೆಯಾಗಿದೆ ಎಂದವರು ನುಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಭಾಸ್ಕರ ರಾವ್ ಕಿದಿಯೂರು, ಸತೀಶ್ ಅಮೀನ್ ಪಡುಕೆರೆ, ಗಣೇಶ್ ನೇರ್ಗಿ, ಜನಾರ್ದನ ಬಂಡರ್ಕರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News