ಬಿಜೂರು ಅಣ್ಣನ ಕೊಲೆ ಪ್ರಕರಣ: ಆರೋಪಿ ತಮ್ಮ ಬಂಧನ
ಬೈಂದೂರು, ಮೇ 4: ಕ್ಷುಲ್ಲಕ ಕಾರಣಕ್ಕಾಗಿ ಅಣ್ಣ ಬಿಜೂರು ಗ್ರಾಮದ ಮೇಲ್ಮಕ್ಕಿ ಚೌಕ ನಿವಾಸಿ ನಾಗರಾಜ(47) ಎಂಬವರ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ತಮ್ಮ ಸಂತೋಷ್(19) ಎಂಬಾತನನ್ನು ಬೈಂದೂರು ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.
ಮೇ 2ರಂದು ರಾತ್ರಿ 9 ಗಂಟೆ ಸುಮಾರಿಗೆ ಕುಪ್ಪ ಎಂಬವರ ಮಗ ನಾಗರಾಜ, ಸಂತೋಷ ಹಾಗೂ ಅವರ ಬಾವ ಬಾಬು ಎಂಬವರು ಮದ್ಯ ಸೇವಿಸಿ ಮನೆಗೆ ಬಂದಿದ್ದು, ಊಟ ಮಾಡಿದ ಬಳಿಕ ನಾಗರಾಜ್ ಹಾಗೂ ಬಾಬು ಮನೆಯ ಎದುರಿನ ಚಪ್ಪರದಲ್ಲಿ ಮಲಗಿಗೊಂಡಿದ್ದರು. ಈ ವೇಳೆ ಸಂತೋಷನು ನಿಕ್ಕರ್ ಹಾಕಿಕೊಂಡು ಮನೆಯ ಬಳಿ ತಿರುಗಾಡುತ್ತಿದ್ದನು.
ಇದನ್ನು ನೋಡಿದ ನಾಗರಾಜ್, ಇಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ತಿರುಗಾಡುತ್ತಾರೆ, ನಿನಗೆ ನಾಚಿಕೆ ಆಗುವುದಿಲ್ಲವೇ ಎಂದು ಹೇಳಿದ್ದರು. ಇದರಿಂದ ಸಿಟ್ಟುಗೊಂಡ ಸಂತೋಷ್, ಅಣ್ಣನ ಜೊತೆ ಜಗಳಕ್ಕೆ ಇಳಿದನು. ಅಲ್ಲಿಯೇ ಇದ್ದ ತಂದೆಯ ಊರುಗೋಲಿನಿಂದ ನಾಗರಾಜನ ಮುಖಕ್ಕೆ ತಲೆಗೆ ಕಾಲಿಗೆ ಹೊಡೆದ ಎನ್ನಲಾಗಿದೆ. ಅಲ್ಲದೆ ಅಲ್ಲಿಯೇ ಇದ್ದ ಬಾಬು ಅವರಿಗೂ ಹೊಡೆದನು ಎಂದು ದೂರಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ನಾಗರಾಜ್ ಕುಸಿದು ಬಿದ್ದು ಮೇ 3ರಂದು ನಸುಕಿನ ವೇಳೆ ಎರಡು ಗಂಟೆಗೆ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ನೆಲದ ಮೇಲೆ ಬಿದ್ದಿದ್ದ ರಕ್ತವನ್ನು ಒರೆಸಿ ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ. ಕೊಲೆ ನಡೆಸಿದ ಬಳಿಕ ತಲೆ ಮರೆಸಿಕೊಂಡಿದ್ದ ಸಂತೋಷ್‌ನನ್ನು ಪೊಲೀಸರು ಬಂಧಿಸಿದ್ದು, ಇಂದು ರಾತ್ರಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.