ಮಹಿಳೆಯ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಬಾರದು ಎಂದ ನ್ಯಾ. ಚಂದ್ರಚೂಡ್

Update: 2019-05-05 07:25 GMT

ಹೊಸದಿಲ್ಲಿ, ಮೇ 5: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಹಿಳೆಯ ಗೈರುಹಾಜರಿಯಲ್ಲಿ ತನಿಖೆ ನಡೆಸುವುದು ಬೇಡ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ವಿಚಾರಣಾ ಸಮಿತಿಗೆ ಸಲಹೆ ನೀಡುವುದರೊಂದಿಗೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ ಎಂದು indianexpress.com ವರದಿ ಮಾಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಜ್ಯೇಷ್ಠತೆಯಲ್ಲಿ 10ನೆಯವರಾಗಿರುವ ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಸೇವಾ ಹಿರಿತನ ಆಧಾರದಲ್ಲಿ 2022 ರಿಂದ 2024ರವರೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ಇದೆ.

ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಹ ನ್ಯಾಯಮೂರ್ತಿ ನಾರಿಮನ್ ಅವರೊಂದಿಗೆ ವಿಚಾರಣಾ ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ಶುಕ್ರವಾರ ಸಂಜೆ ಈ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ, ಇಂದು ಮಲ್ಹೋತ್ರಾ ಮತ್ತು ಇಂದಿರಾ ಬ್ಯಾನರ್ಜಿಯವರನ್ನು ಒಳಗೊಂಡ ಸಮಿತಿ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಇಬ್ಬರೂ ನ್ಯಾಯಮೂರ್ತಿಗಳು ಈಗ ನಡೆಯುತ್ತಿರುವ ವಿಚಾರಣೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಜ್ಯೇಷ್ಠತೆಯಲ್ಲಿ ಐದನೇ ಸ್ಥಾನದಲ್ಲಿರುವ ನ್ಯಾಯಮೂರ್ತಿ ನಾರಿಮನ್ ಅವರು ಪ್ರಸ್ತುತ ಕೊಲಿಜಿಯಂ ಸದಸ್ಯರು. ದೂರುದಾರರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಿದರೆ ಸುಪ್ರೀಕೋರ್ಟ್ ‍ನ ವಿಶ್ವಾಸಾರ್ಹತೆಗೆ ಮತ್ತಷ್ಟು ಧಕ್ಕೆ ಉಂಟಾಗುತ್ತದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ಮೇ 2ರಂದು ಸಮಿತಿಗೆ ಬರೆದ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ದೂರುದಾರರಿಗೆ ವಕೀಲರನ್ನು ಒದಗಿಸುವ ಕುರಿತ ಬೇಡಿಕೆಗೆ ಸಮಿತಿ ಒಪ್ಪಬೇಕು ಅಥವಾ ತನಿಖೆಗೆ ಕೋರ್ಟ್ ಸಲಹೆಗಾರರನ್ನು (ಎಮಿಕಸ್ ಕ್ಯೂರಿ) ನೇಮಕ ಮಾಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ವಿಚಾರಣೆಯಿಂದ ಹಿಂದೆ ಸರಿದಿರುವುದಾಗಿ ದೂರುದಾರರು ಹೇಳಿಕೆ ನೀಡಿದ ಬಳಿಕ ದೂರುದಾರರ ಅನುಪಸ್ಥಿತಿಯಲ್ಲೇ ಪ್ರಕರಣ ವಿಚಾರಣೆ ನಡೆಸಲು ಸಮಿತಿ ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News