ಕೇಜ್ರಿವಾಲ್‌ಗೆ ಹಲ್ಲೆಗೈದ ವ್ಯಕ್ತಿಯ ವಿರುದ್ಧ ಎಫ್‌ಐಆರ್

Update: 2019-05-05 16:16 GMT

ಹೊಸದಿಲ್ಲಿ, ಮೇ 5: ಶನಿವಾರ ರೋಡ್‌ ಶೋ ಸಂದರ್ಭ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಕಪಾಳಮೋಕ್ಷ ನಡೆಸಿದ ವ್ಯಕ್ತಿಯ ವಿರುದ್ಧ ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಘಟನೆಯ ಬಗ್ಗೆ ಡಿಸಿಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕೇಜ್ರಿವಾಲ್‌ಗೆ ಹಲ್ಲೆ ನಡೆಸಿದ ಸುರೇಶ್ ಎಂಬಾತ ಆಮ್ ಆದ್ಮಿ ಪಕ್ಷ(ಆಪ್)ದ ಕಾರ್ಯಕರ್ತನೇ ಆಗಿದ್ದು ಆಪ್ ಮುಖಂಡರ ಕಾರ್ಯವೈಖರಿಯ ಬಗ್ಗೆ ಅಸಮಾಧಾನಗೊಂಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಈ ಹೇಡಿತನದ ಕೃತ್ಯದ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆಪ್ ಆರೋಪಿಸಿದೆ.

ಸಶಸ್ತ್ರ ಸೇನಾಪಡೆಗಳ ಬಗ್ಗೆ ಪಕ್ಷದ ಮುಖಂಡರು ಅವಿಶ್ವಾಸ ವ್ಯಕ್ತಪಡಿಸಿರುವ ಬಗ್ಗೆ ಸುರೇಶ್‌ಗೆ ಆಕ್ರೋಶದ ಭಾವನೆಯಿತ್ತು. ಆತ ಪಕ್ಷದ ರ್ಯಾಲಿಗಳನ್ನು ಸಂಘಟಿಸುತ್ತಿದ್ದ . ಆದ್ದರಿಂದಲೇ ಶನಿವಾರ ರ್ಯಾಲಿಯಲ್ಲಿ ಮುಖ್ಯಮಂತ್ರಿಗಳನ್ನು ಸ್ವಾಗತಿಸುವ ತಂಡದಲ್ಲಿ ಈತ ತಲೆಗೆ ಆಪ್ ಪಕ್ಷದ ಶಾಲು ಸುತ್ತಿಕೊಂಡು ನಿಂತಿದ್ದ ಮತ್ತು ಇದಕ್ಕೆ ಯಾರೂ ಆಕ್ಷೇಪಿಸಿರಲಿಲ್ಲ. ಕೇಜ್ರಿವಾಲ್ ಸಾಗುತ್ತಿದ್ದ ಜೀಪ್‌ನ ಎದುರು ಬದಿಯ ಚಕ್ರದ ಬಳಿ ನಿಂತಿದ್ದ ಸುರೇಶ್ ತಲೆಗೆ ಸುತ್ತಿದ್ದ ಶಾಲನ್ನು ಬಿಸಾಡಿ ಜೀಪಿನ ಮೇಲೇರಿ ಕೇಜ್ರೀವಾಲ್‌ರನ್ನು ಥಳಿಸಲು ಪ್ರಯತ್ನಿಸಿದ ಎಂದು ದಿಲ್ಲಿ ಪೊಲೀಸ್ ವಿಭಾಗದ ಹೆಚ್ಚುವರಿ ಪಿಆರ್‌ಒ ಅನಿಲ್ ಮಿತ್ತಲ್ ಹೇಳಿದ್ದಾರೆ.

ಹಲ್ಲೆಗೈದ ವ್ಯಕ್ತಿಯನ್ನು ದಿಲ್ಲಿ ಪೊಲೀಸರೇ ರ್ಯಾಲಿಯಲ್ಲಿ ನಿಯೋಜಿಸಿರುವುದು ನಿಜಕ್ಕೂ ನಾಚಿಕೆಗೇಡಿನ ವಿಷಯವಾಗಿದೆ. ಹಲ್ಲೆಗೈದ ವ್ಯಕ್ತಿ ಮೋದಿಯ ಭಕ್ತನಾಗಿದ್ದು, ಮೋದಿ ವಿರುದ್ಧ ಯಾರೇ ಮಾತಾಡಿದರೂ ಸಹಿಸುವುದಿಲ್ಲ ಎಂದು ಆತನ ಪತ್ನಿಯೇ ಹೇಳಿದ್ದಾರೆ ಎಂದು ಆಪ್ ವಕ್ತಾರ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News