×
Ad

ಮಹಿಳೆಯ ಅತ್ಯಾಚಾರಗೈದು ಬ್ಲ್ಯಾಕ್ ಮೇಲ್ ಮಾಡಿದ ಆರೋಪ: ಟಿ.ವಿ. ನಟನ ಬಂಧನ

Update: 2019-05-06 20:27 IST

ಹೊಸದಿಲ್ಲಿ, ಮೇ 6: ಜನಪ್ರಿಯ ಹಿಂದಿ ಶೋ ‘ಜೈಸಿ ಜೈಸಿ ಕೋಹಿ ನಹಿ’ಯಲ್ಲಿ ರಾಘವನ ಪಾತ್ರದಲ್ಲಿ ಜನಪ್ರಿಯರಾಗಿರುವ ಟಿ.ವಿ. ನಟ ಕರಣ್ ಒಬೆರಾಯ್ ಅವರನ್ನು ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕರಣ್ ಒಬೆರಾಯ್ ಮಹಿಳೆಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಹಾಗೂ ಅವರನ್ನು ಬ್ಲ್ಯಾಕ್‌ ಮೇಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮುಂಬೈಯ ಒಶಿವಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ‘‘ಮಹಿಳೆ ಸಲ್ಲಿಸಿದ ದೂರಿನ ಆಧಾರದಲ್ಲಿ ನಾವು ಕರಣ್ ಒಬೆರಾಯ್ ಅವರನ್ನು ಬಂಧಿಸಿದ್ದೇವೆ. ಅವರು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ’’ ಎಂದು ಒಶಿವಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶೈಲೇಶ್ ಪಸಲ್ವಾರ್ ತಿಳಿಸಿದ್ದಾರೆ.

‘‘ಒಬೆರಾಯ್ ಮಹಿಳೆಯ ಮೇಲೆ ಅತ್ಯಾಚಾರ ಮಾಡಿರುವುದು ಮಾತ್ರವಲ್ಲದೆ, ಅದನ್ನು ವೀಡಿಯೊ ಕೂಡ ಮಾಡಿದ್ದರು. ದೊಡ್ಡ ಮೊತ್ತದ ಹಣದ ಬೇಡಿಕೆ ಒಡ್ಡಿದ್ದ ಒಬೆರಾಯ್ ಹಣ ನೀಡದೇ ಇದ್ದರೆ ವೀಡಿಯೊವನ್ನು ಬಿಡುಗಡೆ ಮಾಡಲಾಗುವುದು ಎಂದು ಮಹಿಳೆಗೆ ಬೆದರಿಕೆ ಒಡ್ಡಿದ್ದರು.’’ ಎಂದು ಎಫ್‌ಐಆರ್ ಉಲ್ಲೇಖಿಸಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 ಶೋ ಹಾಗೂ ಜಾಹೀರಾತುಗಳಲ್ಲಿ ನಟನೆಯ ಹೊರತಾಗಿ ಕರಣ್ ಒಬೆರಾಯ್ ಉತ್ತಮ ಹಾಡುಗಾರ. ಬ್ಯಾಂಡ್ ಬಾಯ್ ಎಂದು ಕರೆಯಲಾಗುವ ಪಾಪ್ ಬಾಂಡ್‌ನ ಸದಸ್ಯ. ಈ ಪಾಪ್ ಬಾಂಡ್‌ನಲ್ಲಿ ಸುಧಾಂಶು ಪಾಂಡೆ, ಶೆರ್ರಿನ್ ವರ್ಗೀಸ್, ಸಿದ್ಧಾರ್ಥ ಹಲ್ದಿಪುರ ಹಾಗೂ ಚೈತನ್ಯಾ ಬೋಸಾಲೆ ಇದ್ದಾರೆ. ಈ ಪಾಪ್ ಬ್ಯಾಂಡ್ ಅನ್ನು 2001ರಲ್ಲಿ ಆರಂಭಿಸಲಾಯಿತು. ಅಮೆಝಾನ್ ಪ್ರೈಮ್ ವೀಡಿಯೊ ವೆಬ್ ಸರಣಿಯಲ್ಲಿ ಇವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News