×
Ad

ಸಿಜೆಐ ವಿರುದ್ಧ ಷಡ್ಯಂತ್ರ: ಸಿಬಿಐ ತನಿಖೆಗೆ ಆಗ್ರಹಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

Update: 2019-05-06 21:02 IST

ಹೊಸದಿಲ್ಲಿ,ಮೇ 6: ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ರಂಜನ್ ಗೊಗೊಯಿ ಅವರನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಸಲು ನಡೆದಿದೆ ಎನ್ನಲಾಗಿರುವ ಷಡ್ಯಂತ್ರದ ಕುರಿತು ಸಿಬಿಐ ತನಿಖೆಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸೂಕ್ತ ಸಮಯದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತಿಳಿಸಿತು.

  ಅರ್ಜಿಯನ್ನು ತುರ್ತು ವಿಚಾರಣೆಗಾಗಿ ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ ಮತ್ತು ಎಸ್.ಅಬ್ದುಲ್ ನಝೀರ್ ಅವರ ಪೀಠದೆದುರು ಉಲ್ಲೇಖಿಸಲಾಗಿತ್ತು.

 ಅಂತಹ ಅವಸರವೇನಿದೆ ಎಂದು ಅರ್ಜಿದಾರ ಎಂ.ಎಲ್.ಶರ್ಮಾ ಅವರನ್ನು ಪ್ರಶ್ನಿಸಿದ ಪೀಠವು,ನೀವು ಅರ್ಜಿಯನ್ನು ಸಲ್ಲಿಸಿದ್ದೀರಿ. ಅದು ಸೂಕ್ತ ಸಮಯದಲ್ಲಿ ವಿಚಾರಣೆಗೆ ಬರುತ್ತದೆ ಎಂದು ಹೇಳಿತು.

ಸಿಜೆಐ ಹೆಸರು ಕೆಡಿಸಲು ಸಂಚು ಹೂಡಿದ್ದ ಆರೋಪದಲ್ಲಿ ವಕೀಲರಾದ ಪ್ರಶಾಂತ್ ಭೂಷಣ, ಕಾಮಿನಿ ಜೈಸ್ವಾಲ್, ಇಂದಿರಾ ಜೈಸಿಂಗ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲು ಸಿಬಿಐಗೆ ನಿರ್ದೇಶ ನೀಡುವಂತೆ ತನ್ನ ಅರ್ಜಿಯಲ್ಲಿ ಕೋರಿರುವ ಶರ್ಮಾ,ಗೊಗೊಯಿ ಅವರನ್ನು ಸುಳ್ಳು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಹೇಳಿದ್ದಾರೆ.

 ಭೂಷಣ್ ಮತ್ತು ಇತರರು ಗೊಗೊಯಿ ವಿರುದ್ಧದ ದೂರಿನ ಕರಡನ್ನು ಸಿದ್ಧಗೊಳಿಸಿದ್ದರು ಎಂದು ಹೇಳಿರುವ ಅವರು,ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಕೆಲವು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದಾರೆ. ನ್ಯಾಯವಾದಿಗಳಾದ ವೃಂದಾ ಗ್ರೋವರ್,ಶಾಂತಿಭೂಷಣ,ನೀನಾ ಗುಪ್ತಾ ಭಾಸಿನ್ ಮತ್ತು ದುಷ್ಯಂತ ದವೆ ಅವರನ್ನೂ ಶರ್ಮಾ ತನ್ನ ಅರ್ಜಿಯಲ್ಲಿ ಹೆಸರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News