ಶ್ರದ್ಧೆ , ಪರಿಶ್ರಮದಿಂದ ಯಶಸ್ವೀ ಜೀವನ ಸಾಧ್ಯ: ಅಬ್ದುಲ್ಲಾ ಇಬ್ರಾಹಿಂ
ಕೊಣಾಜೆ: ಶ್ರದ್ಧೆ ಮತ್ತು ಪರಿಶ್ರಮದಿಂದ ಜೀವನದಲ್ಲಿ ಉನ್ನತಮಟ್ಟಕ್ಕೆ ಏರಬಹುದು ಎಂದು ಪಿ.ಎ.ವಿದ್ಯಾ ಸಂಸ್ಥೆಯ ಕಾರ್ಯನಿರ್ದೇಶಕರಾದ ಅಬ್ದುಲ್ಲಾ ಇಬ್ರಾಹಿಂರವರು ಅಭಿಪ್ರಾಯಪಟ್ಟರು.
ಮಂಗಳೂರಿನ ಪಿ.ಎ. ತಾಂತ್ರಿಕ ಮಹಾ ವಿದ್ಯಾಲಯದ 19ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯ ಕ್ರಮದಲ್ಲಿ ಅತಿಥಿಯಾಗಿದ್ದ ಐಸಿರಿ ಟೆಕ್ನಾಲಜಿಯ ಮುಖ್ಯಸ್ಥ ವಿಷ್ಣು ಶಶಾಂಕ್ ಬಿ. ಅವರು ಮಾತನಾಡಿ, ವಿದ್ಯಾರ್ಥಿಗಳು ಸಂಶೋಧನೆ ಯಲ್ಲಿ ನವೀನತೆಯನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ನಾವು ಸಾಧನೆಯ ಮೂಲಕ ಸಮಾಜಕ್ಕೂ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಭಾರತ ಸರಕಾರದಿಂದ ಪೇಟೆಂಟ್ ಪಡೆದ ಬಯೋಟೆಕ್ನಾಲಜಿಯ ವಿಭಾಗದ ವಿದ್ಯಾರ್ಥಿ ರೋಷನ್ ಶೆಟ್ಟಿ ಸಿ. ಜಿ ಹಾಗೂ ಬಯೋಟೆಕ್ನಾಲಜಿಯ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2018ರ ಪರೀಕ್ಷೆಯಲ್ಲಿ 10ನೇ ರ್ಯಾಂಕ್ ಗಳಿಸಿದ ಕುಮಾರಿ ಅಂಜು ಬಿ. ಅವರನ್ನು ಸನ್ಮಾನಿಸಲಾಯಿತು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜೀಶಾನ್ ಆಬ್ದುಲ್ಲಾ ಪ್ರಾರ್ಥನೆಗೈದರು. ಶೈಕ್ಷಣಿಕ ವಿಭಾಗದ ಡಾ. ಸರ್ಫರಾಜ್ ಜೆ. ಹಾಷಿಮ್ ಸ್ವಾಗತಿಸಿ, ಉಪಪ್ರಾಶುಂಪಾಲರಾದ ಡಾ. ರಮೀಜ್ ಎಮ್.ಕೆ ವಂದಿಸಿದರು. ಕಾರ್ಯಕ್ರಮದ ಸಂಯೋಜಕರಾದ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಇಸ್ಮಾಯಿಲ್ ಶಾಫಿ, ವಿದ್ಯಾರ್ಥಿನಿಯರಾದ ಶಹನಾ ಹಾಗೂ ಇನಾಜ್‍ನೂರಿ ಕಾರ್ಯಕ್ರಮವನ್ನು ನಿರೂಪಿಸಿದರು.