ಮಧ್ಯಪ್ರಾಚ್ಯಕ್ಕೆ ವಿಮಾನವಾಹಕ ಯುದ್ಧನೌಕೆ, ಬಾಂಬರ್ ವಿಮಾನ ಕಳುಹಿಸಿದ ಅಮೆರಿಕ

Update: 2019-05-06 16:40 GMT

ವಾಶಿಂಗ್ಟನ್, ಮೇ 6: ಅಮೆರಿಕವು ಮಧ್ಯಪ್ರಾಚ್ಯಕ್ಕೆ ಒಂದು ವಿಮಾನವಾಹಕ ಯುದ್ಧನೌಕೆ ಮತ್ತು ಒಂದು ಬಾಂಬರ್ ಟಾಸ್ಕ್ ಫೋರ್ಸ್ ಯುದ್ಧ ವಿಮಾನವನ್ನು ಕಳುಹಿಸುತ್ತಿದೆ ಹಾಗೂ ಇದು ಇರಾನ್‌ಗೆ ನೀಡುತ್ತಿರುವ ‘ಸ್ಪಷ್ಟ ಮತ್ತು ನೇರ’ ಸಂದೇಶವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ರವಿವಾರ ಹೇಳಿದ್ದಾರೆ.

‘‘ಹಲವು ಕಳವಳಕಾರಿ ಮತ್ತು ಉದ್ವಿಗ್ನಕಾರಿ ಸೂಚನೆಗಳು ಮತ್ತು ಎಚ್ಚರಿಕೆಗಳಿಗೆ ಪ್ರತಿಯಾಗಿ, ಅಮೆರಿಕವು ವಿಮಾನವಾಹಕ ನೌಕೆ ಯುಎಸ್‌ಎಸ್ ಅಬ್ರಹಾಮ್ ಲಿಂಕನ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಮತ್ತು ಒಂದು ಬಾಂಬರ್ ಟಾಸ್ಕ್ ಫೋರ್ಸ್ ಯುದ್ಧ ವಿಮಾನವನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ ವಲಯಕ್ಕೆ ಕಳುಹಿಸುತ್ತಿದೆ’’ ಎಂದು ಬೋಲ್ಟನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

 ‘‘ಅಮೆರಿಕದ ಹಿತಾಸಕ್ತಿಗಳ ಮೇಲೆ ಅಥವಾ ನಮ್ಮ ಮಿತ್ರದೇಶಗಳ ಹಿತಾಸಕ್ತಿಗಳ ಮೇಲೆ ನಡೆಸಲಾಗುವ ಯಾವುದೇ ದಾಳಿಯನ್ನು ಅಗಾಧ ಶಕ್ತಿಯಿಂದ ಎದುರಿಸಲಾಗುವುದು ಎಂಬ ಸ್ಪಷ್ಟ ಸೂಚನೆಯನ್ನು ಇರಾನ್ ಸರಕಾರಕ್ಕೆ ನೀಡುವುದಕ್ಕಾಗಿ ಈ ಯುದ್ಧನೌಕೆಗಳನ್ನು ನಿಯೋಜಿಸಲಾಗಿದೆ’’ ಎಂದು ಬೋಲ್ಟನ್ ಹೇಳಿದರು.

 ‘‘ಅಮೆರಿಕವು ಇರಾನ್‌ನೊಂದಿಗೆ ಯುದ್ಧವನ್ನು ಬಯಸುತ್ತಿಲ್ಲ, ಆದರೆ, ಛಾಯಾ ಸಮರದ ಮೂಲಕ, ಇಸ್ಲಾಮಿಕ್ ರೆವಲೂಶನರಿ ಗಾರ್ಡ್ಸ್ ಕಾರ್ಪ್ಸ್ ಮೂಲಕ ಅಥವಾ ವಾಡಿಕೆಯ ಇರಾನ್ ಪಡೆಗಳ ಮೂಲಕ ನಡೆಸಲಾಗುವ ಯಾವುದೇ ದಾಳಿಗೆ ಪ್ರತಿಕ್ರಿಯಿಸಲು ನಾವು ಸಂಪೂರ್ಣವಾಗಿ ತಯಾರಾಗಿದ್ದೇವೆ’’ ಎಂದರು.

ಯುದ್ಧನೌಕೆಗಳು ಮತ್ತು ಬಾಂಬರ್ ವಿಮಾನಗಳನ್ನು ಈಗ ಯಾಕೆ ನಿಯೋಜಿಸಲಾಗುತ್ತಿದೆ ಎಂಬುದನ್ನು ಹೇಳಿಕೆಯು ನಿರ್ದಿಷ್ಟವಾಗಿ ತಿಳಿಸಿಲ್ಲ. ಆದರೆ, ಗಾಝಾದ ಫೆಲೆಸ್ತೀನ್ ಬಂಡುಕೋರರು ಮತ್ತು ಇಸ್ರೇಲ್ ಸೈನಿಕರ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ಹಿನ್ನೆಲೆಯಲ್ಲಿ ಈ ನಿಯೋಜನೆ ನಡೆದಿರುವುದು ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News