ಸಲಿಂಗ ಕಾಮ, ವ್ಯಭಿಚಾರಕ್ಕಾಗಿ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ರದ್ದು: ಬ್ರೂನೈ ಸುಲ್ತಾನ

Update: 2019-05-06 16:47 GMT

ಬಾಂಡರ್ ಸಿರೀ ಬಿಗೋವನ್ (ಬ್ರೂನೈ), ಮೇ 6: ಸಲಿಂಗ ಕಾಮ ಮತ್ತು ವ್ಯಭಿಚಾರಕ್ಕಾಗಿ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆಯನ್ನು ಜಾರಿಗೊಳಿಸುವುದಿಲ್ಲ ಎಂದು ಬ್ರೂನೈ ದೇಶದ ದೊರೆ ಸುಲ್ತಾನ್ ಹಸನಾಲ್ ಬೋಲ್ಕಿಯ ಪ್ರಕಟಿಸಿದ್ದಾರೆ.

ಈ ಕ್ರಮಗಳಿಗೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ. ಆದರೆ, ಕಠಿಣ ಶರಿಯಾ ಕಾನೂನುಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆದುಕೊಳ್ಳುವಂತೆ ಅವರ ಟೀಕಾಕಾರರು ಒತ್ತಾಯಿಸಿದ್ದಾರೆ.

ಬ್ರೂನೈಯ ಸಾಮಾನ್ಯ ಕ್ರಿಮಿನಲ್ ಸಂಹಿತೆಗೆ ಅನ್ವಯವಾಗುವಂತೆ ಮರಣ ದಂಡನೆಗೆ ಈಗಾಗಲೇ ತಡೆ ವಿಧಿಸಲಾಗಿದೆ ಹಾಗೂ ಈ ತಡೆಯು ವಿವಿಧ ಅಪರಾಧಗಳಿಗಾಗಿ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆಗೂ ಅನ್ವಯವಾಗುವುದು ಎಂದು ರವಿವಾರ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸುಲ್ತಾನ್ ಹೇಳಿದ್ದಾರೆ.

ಬೋರ್ನಿಯೊ ದ್ವೀಪದಲ್ಲಿರುವ ಸಣ್ಣ ದೇಶದಲ್ಲಿ ಶರಿಯಾ ಕಾನೂನು ಕಳೆದ ತಿಂಗಳು ಜಾರಿಗೆ ಬಂದಿದೆ. ಇದರ ಪ್ರಕಾರ, ಕಳ್ಳತನಕ್ಕಾಗಿ ಕೈಗಳು ಮತ್ತು ಪಾದಗಳನ್ನು ಕಡಿಯಲಾಗುತ್ತದೆ.

ಬ್ರೂನೈಯ ಈ ಕ್ರಮದಿಂದ ವಿವಿಧ ದೇಶಗಳು ಮತ್ತು ಮಾನವಹಕ್ಕು ಗುಂಪುಗಳು ಅಸಮಾಧಾನಗೊಂಡಿದ್ದವು ಹಾಗೂ ಇದು ಮಾನವಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂಬುದಾಗಿ ವಿಶ್ವಸಂಸ್ಥೆ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News