ವೈಯುಕ್ತಿಕ ಸಾಧನೆಯೊಂದಿಗೆ ದೇಶಕ್ಕೆ ಕೊಡುಗೆ ಎ.ಆರ್.ಸತೀಶ್ಚಂದ್ರ ಕರೆ
ಉಡುಪಿ, ಮೇ 6: ಇಂದು ಜೀವನದಲ್ಲಿ ಸಾಧನೆ ಮಾಡುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಆದರೆ ಕೇವಲ ವೈಯುಕ್ತಿಕ ಮಟ್ಟದಲ್ಲಿ ಸಾಧನೆ ಮಾಡಿದರೆ ಸಾಲದು, ದೇಶಕ್ಕೂ ಕೊಡುಗೆ ನೀಡುವಂತಹ ಸಾಧನೆಗಳನ್ನು ಮಾಡಬೇಕು ಎಂದು ಕ್ಯಾಂಪ್ಕೋದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಕರೆ ನೀಡಿದ್ದಾರೆ.
ಮಣಿಪಾಲದ ಆರ್.ಎಸ್.ಬಿ. ಸಭಾಭವನದಲ್ಲಿ ಸಾರಸ್ವತ್ ಲರ್ನಿಂಗ್ ಫೌಂಡೇಶನ್ ವತಿಯಿಂದ ನಡೆದ 2 ದಿನಗಳ ಪ್ರೇರಣಾ -2019 ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಅವರು ತಮ್ಮ ಮಾತಿಗೆ ದಿ. ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಉದಾಹರಿಸಿದರು.
ಕುಳಿತು ಆಕಳಿಸುವವನಿಂದ ಸಾಧನೆ ಸಾಧ್ಯವಿಲ್ಲ, ಇಳಿದು ಈಸುವವನಿಂದ ಮಾತ್ರ ಸಾಧನೆ ಸಾಧ್ಯ ಎಂದ ಅವರು, ಇಂದು ಭಾರತ ಡಿಜಿಟಲ್ ಯುಗದತ್ತ ದಾಪುಗಾಲು ಹಾಕುತ್ತಿದೆ. ಅದಕ್ಕೆ ಪ್ರತಿಯೊಬ್ಬರೂ ಸಿದ್ಧರಾಗಬೇಕಾಗಿದೆ. ಆದರೆ ನಮ್ಮ ಋಷಿ ಸಂಸ್ಕೃತಿ, ಕೃಷಿ ಸಂಸ್ಕೃತಿಗಳನ್ನು ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಗ್ರೇಸ್ ಅಕಾಡೆಮಿಯ ಸುಬ್ರಹ್ಮಣ್ಯ ಕುಳೇದು, ಪೂನಾದ ವೀನಸ್ ಗ್ರೂಪ್ ಅಫ್ ಕಂಪೆನಿಯ ಮಾಳ ಸದಾನಂದ ನಾಯಕ್, ಚೆನೈಯ ರಿನೋಲ್ಟ್ಸ್ ಕಾರ್‌ನ ಉಪಾಧ್ಯಕ್ಷೆ ವಿಲಾಸಿನಿ ಕಾಮತ್, ಬೆಂಗಳೂರಿನ ಜಿಎಫ್‌ಐ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಾಸುದೇವ ನಾಯಕ್, ಬೆಂಗಳೂರಿನ ಮಿಂಗೋಲಜಿ ಫುಡ್ಸ್ ಬ್ರೆವೇರಿಸ್ ನ ಆಡಳಿತ ನಿರ್ದೇಶಕ ಸಂತೋಷ್ ಪ್ರಭು, ಕರ್ನಾಟಕ ಬ್ಯಾಂಕಿನ ನಿವೃತ್ತ ಮಹಾಪ್ರಬಂಧಕ ಉಪೇಂದ್ರ ಪ್ರಭು ಉಪಸ್ಥಿತ ರಿದ್ದರು.
ಸಾರಸ್ವತ್ ಲರ್ನಿಂಗ್ ಫೌಂಡೇಶನ್ ಅಧ್ಯಕ್ಷ ಸುರೇಂದ್ರ ವಾಗ್ಳೆ ಸ್ವಾಗತಿಸಿದರು, ಟ್ರಸ್ಟಿ ಗೋವಿಂದರಾಯ ಪ್ರಭು ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಪ್ರಾಧ್ಯಾಪಕ ರವೀಂದ್ರಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.