ಒಳಚರಂಡಿ ವ್ಯಸ್ಥೆ ಸರಿಪಡಿಸಿದರೆ ಉಡುಪಿ ನಗರದ ಶೇ.20ರಷ್ಟು ನೀರಿನ ಸಮಸ್ಯೆ ಪರಿಹಾರ: ಡಾ.ಶಾನುಭಾಗ್
ಉಡುಪಿ, ಮೇ 8: ಉಡುಪಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸಮಪರ್ಕ ವಾಗಿರದೆ ಅಂತರ್ಜಲ ಸಂಪೂರ್ಣ ಹಾಳಾಗಿ ಜಲಮೂಲಗಳ ನೀರು ಬಳಕೆಗೆ ಅಯೋಗ್ಯವಾಗಿದೆ. ಆದುದರಿಂದ ನಗರದ ಒಳಚರಂಡಿ ವ್ಯವಸ್ಥೆ ಸರಿಯಾದರೆ ನಗರದ ಶೇ.20ರಷ್ಟು ಕುಡಿಯುವ ನೀರಿನ ಸಮಸ್ಯೆ ಯನ್ನು ಬಗೆಹರಿಸ ಬಹುದಾಗಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಸಂಚಾಲಕ ಡಾ. ರವೀಂದ್ರನಾಥ್ ಶ್ಯಾನುಭಾಗ್ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ನಗರದ ನೀರಿನ ಸಮಸ್ಯೆ ಕುರಿತು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್‌ಕ್ಲಬ್ ವತಿಯಿಂದ ಬುಧವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತ ನಾಡುತಿದ್ದರು.
ನೀರಿನ ಮೂಲಗಳಾದ ಬಾವಿ ಹಾಗೂ ಕೊಳವೆಬಾವಿಗಳನ್ನು ರಿಚಾರ್ಜ್ ಮಾಡಬೇಕೆಂಬ ಸಲಹೆ ಉಡುಪಿಯಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಮಣಿಪಾಲದ ಸುಮಾರು 150 ಕಟ್ಟಡಗಳಿಗೆ ಒಳಚರಂಡಿ ವ್ಯವಸ್ಥೆಯೇ ಇಲ್ಲ. ಎತ್ತರ ಪ್ರದೇಶ ದಲ್ಲಿರುವ ಈ ಕಟ್ಟಡಗಳ ತ್ಯಾಜ್ಯ ನೀರು ಭೂಮಿ ಯೊಳಗೆ ಸೇರಿ ಇಡೀ ನಗರದ ಅಂತರ್ಜಲವನ್ನು ಮಲೀನಗೊಳಿಸಿದೆ. ಸರಳಬೆಟ್ಟು, ಇಂದ್ರಾಳಿ, ಕರಂಬಳ್ಳಿ ವಾರ್ಡ್‌ಗಳ ಬಾವಿಯ ನೀರನ್ನು ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಒಂದೇ ಒಂದು ಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದರು.
ಅದೇ ರೀತಿ ಬನ್ನಂಜೆ, ಗುಂಡಿಬೈಲು, ಬಡಗುಪೇಟೆ, ಕುಕ್ಕಿಕಟ್ಟೆಯಲ್ಲೂ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಒಳಚರಂಡಿ ವ್ಯವಸ್ಥೆ ಅಸ್ತವ್ಯಸ್ತ ಗೊಂಡಿ ರುವಲ್ಲಿ ನೀರು ಕುಡಿಯಲು ಅಯೋಗ್ಯವಾಗಿದೆ. ಬನ್ನಂಜೆಯ ಸುಮಾರು 200 ಬಾವಿಗಳು ಇಂದಿಗೂ ಕುಡಿಯಲು ಸಾಧ್ಯವಿಲ್ಲ. ಮೂಡನಿಡಂಬೂರು, ಮಠದ ಬೆಟ್ಟು ವ್ಯಾಪ್ತಿಯಲ್ಲೂ ನೀರು ಕುಡಿಯಲು ಯೋಗ್ಯವಾಗಿಲ್ಲ. ನಮ್ಮ ಬಾವಿಯ ನೀರನ್ನು ಹಾಳು ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಕಾನೂನಿನಲ್ಲಿ ಅವಕಾ ಇದೆ ಎಂದು ಅವರು ತಿಳಿಸಿದರು.
ಕೊಳವೆಬಾವಿಗಳು ಅವೈಜ್ಞಾನಿಕ: ನಗರದಲ್ಲಿ ಆರು ಮೀಟರ್‌ಗೆ ಒಂದು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಇಲ್ಲಿ ಕೊಳವೆಬಾವಿಗಳು ವೈಜ್ಞಾನಿಕ ವಾಗಿಲ್ಲ. ಈ ಎಲ್ಲ ಕೊಳವೆ ಬಾವಿಗಳಿಗೆ ಜಲಮೂಲ ಅಂತರ್ಜಲವೇ ಆಗಿರು ವುದರಿಂದ ಅವು ಕೇವಲ ಒಬ್ಬರ ಆಸ್ತಿ ಆಗಲು ಸಾಧ್ಯವಿಲ್ಲ. ನಗರದಲ್ಲಿರುವ ಕೊಳವೆಬಾವಿಗಳು ವೈಜ್ಞಾನಿಕವಾಗಿದೆಯೇ ಎಂಬುದರ ಬಗ್ಗೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಉತ್ತರಿಸಬೇಕಾಗಿದೆ ಎಂದು ಡಾ.ಶಾನುಭಾಗ್ ಆಗ್ರಹಿಸಿದರು.
ನಗರದಲ್ಲಿ ಸುಮಾರು 350 ಕೊಳಬಾವಿಗಳಿವೆ. ಅದೆಲ್ಲವೂ ಹಾಳಾಗಿ, ಅದರ ನೀರು ಕುಡಿಯಲು ಅಯೋಗ್ಯವಾಗಿದೆ. ಇವುಗಳನ್ನು ಪುನಶ್ಚೇತನಗೊಳಿ ಸಿದರೂ ಕುಡಿಯಲು ಯೋಗ್ಯ ನೀರು ಸಿಗುವುದು ಕಷ್ಟ. ನಗರದಲ್ಲಿರುವ 128 ಫ್ಲ್ಯಾಟ್ಗಳಲ್ಲಿ ಬೋರ್‌ವೆಲ್ ನೀರನ್ನು ಸರಿಯಾಗಿ ಬಳಕೆ ಮಾಡುತ್ತಿದ್ದಾರೆಯೇ ಎಂಬುದು ನಮ್ಮ ಪ್ರಶ್ನೆಯಾಗಿದೆ. ಒಂದೊಂದು ಪ್ಲ್ಯಾಟ್ನವರು ಎಷ್ಟು ನೀರು ಬಳಕೆ ಮಾಡುತ್ತಿದ್ದರೆ ಎಂಬ ಲೆಕ್ಕ ಸಿಗುತ್ತಿಲ್ಲ ಎಂದರು.
ಉಡುಪಿಯಲ್ಲಿ ಟ್ಯಾಂಕರ್ ನೀರು ಸರಬರಾಜು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ.ಶ್ಯಾನುಭಾಗ್, ಟ್ಯಾಂಕರ್‌ನವರು ಆತ್ರಾಡಿ, ಕಲ್ಯಾಣಪುರದ ಗುಂಡಿ, ಕಲ್ಲುಕೋರೆಗಳಿಂದ ನೀರು ತರುತ್ತಾರೆ. ಈ ನೀರು ಸ್ನಾನ ಮಾಡಲು ಕೂಡ ಯೋಗ್ಯವಾಗಿರುವುದಿಲ್ಲ. ಅಂತಹ ನೀರನ್ನು ಕುಡಿಯಲು ಸರಬರಾಜು ಮಾಡಲಾಗುತ್ತದೆ. ಈ ಬಗ್ಗೆ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ಸಮಗ್ರ ಅಧ್ಯಯನ ಆಗಬೇಕು. ಅದಕ್ಕೆ ಪ್ರತಿಷ್ಠಾನ ಸಹಕಾರ ನೀಡುತ್ತದೆ ಎಂದು ಅವರು ತಿಳಿಸಿದರು.
ಹಿರಿಯ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯಾಯ ಮಾತನಾಡಿ, ಉಡುಪಿಯಲ್ಲಿ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅನುಕೂಲವಾಗು ವಂತೆ ಸಮುದ್ರದ ಉಪ್ಪು ನೀರನ್ನು ಶುದ್ದೀಕರಿಸುವ ಘಟಕವನ್ನು ಸ್ಥಾಪಿಸಬೇಕು. ಸ್ವರ್ಣ ನದಿಯ ನೀರನ್ನು ಮಣಿಪಾಲದವರಿಗೆ ನೀಡಿ, ಉಡುಪಿ ನಗರಕ್ಕೆ ವಾರಾಹಿ ನೀರು ಪೂರೈಕೆ ಮಾಡಬೇಕು. ತುರ್ತು ಸಂದರ್ಭದಲ್ಲಿ ಉಪ್ಪು ನೀರನ್ನು ಶುದ್ದೀಕರಿಸಿ ಬಳಸಿದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಬಹುದು ಎಂದು ತಿಳಿಸಿದರು.
ಕಿಂಡಿ ಅಣೆಕಟ್ಟಿಗೆ ಆದ್ಯತೆ ನೀಡಿ
ಕರಾವಳಿಯಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳಿಗೆ ಪ್ರತಿ ಐದು ಕಿ.ಮೀ.ಗೊಂದು ಕಿಂಡಿ ಅಣೆಕಟ್ಟನ್ನು ನಿರ್ಮಿಸಿದರೆ, ಅದರಿಂದ ಅಲ್ಲಲ್ಲಿ ನೀರಿನ ಸಂಗ್ರಹವಾಗಿ ಅಂತರ್ಜಲ ವೃದ್ದಿಯಾಗುತ್ತದೆ. ಪರಿಸರದ ಬಾವಿಗಳಲ್ಲಿ ಸದಾ ನೀರಿರುತ್ತದೆ. ಕಿಂಡಿ ಅಣೆಕಟ್ಟುಗಳ ನಿರ್ಮಾಣದೊಂದಿಗೆ ಅವುಗಳ ನಿರ್ವಹಣೆಯೂ ಸಮರ್ಪಕವಾಗಿ ನಡೆಯುವಂತೆಯೂ ನೋಡಿಕೊಳ್ಳಬೇಕು ಎಂದು ಡಾ.ಶ್ಯಾನುಭಾಗ್ ನುಡಿದರು.
ನಗರದಲ್ಲಿ ನೀರಿನ ಬೇಡಿಕೆ ಹೆಚ್ಚಾಗುತ್ತಿದ್ದರೂ ಈವರೆಗೆ ಸ್ವರ್ಣ ನದಿಗೆ ಕೇವಲ ಎರಡು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಕೋಟಿಗಟ್ಟಲೆ ಖರ್ಚು ಮಾಡಿ ವಾರಾಹಿಯಿಂದ ನೀರು ತರುವ ಬದಲು ಸ್ವರ್ಣ ನದಿಗೆ ಪ್ರತಿ ಐದು ಕಿ.ಮೀ.ಗೆ ಒಂದು ಕಿಂಡಿ ಅಣೆಕಟ್ಟು ನಿರ್ಮಿಸಿದರೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಡಾ.ಶಾನುಭಾಗ್ ಅಭಿಪ್ರಾಯ ಪಟ್ಟರು.
ಸಾರ್ವಜನಿಕರೇ, ನಗರಸಭೆ ನೀರಿನ ಲೆಕ್ಕಪರಿಶೋಧನೆ ನಡೆಸಿ
ಜಾಗೃತ ನಾಗರಿಕರಿಂದ ಒಂದು ಊರಿನ, ನಗರದ ಹೆಚ್ಚಿನ ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಲು ಸಾಧ್ಯವಿದೆ. ಎಲ್ಲಿ ಸಾರ್ವಜನಿಕರು ಜಾಗೃತರಾಗಿರು ವುದಿಲ್ಲವೊ ಅಲ್ಲಿ ಅಧಿಕಾರಿಗಳದೇ ಆಟವಾಗುತ್ತದೆ. ಈಗ ಉಡುಪಿಯಲ್ಲಿ ನೀರಿಗೆ ಸಮಸ್ಯೆ ಎದುರಾಗಿದ್ದು, ಜನರು ನಗರಸಭೆಯಿಂದ ನೀರಿನ ಲೆಕ್ಕ ಪರಿಶೋಧನೆಗೆ ಮುಂದಾಗಿದ್ದರೆ ಇದನ್ನು ತಪ್ಪಿಸಲು ಸಾಧ್ಯವಿತ್ತೇನೊ ಎಂದರು.
1982ರಲ್ಲಿ ಉಡುಪಿಯಲ್ಲಿ ನಳ್ಳಿ ನೀರಿನ ಹಗರಣವೊಂದು ನಡೆದಿದ್ದು, ನಗರದಲ್ಲಿ ಕುಡಿಯುವ ನೀರಿಗೆ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಆಗ ಉಡುಪಿಯ ಜನರೆಲ್ಲಾ ಸೇರಿ ಡಾ.ಶಿವರಾಮ ಕಾರಂತರ ನೇತೃತ್ವದಲ್ಲಿ ರಥಬೀದಿಯಲ್ಲಿ ಒಂದು ಸಾರ್ವಜನಿಕ ಸಭೆ ಕರೆದು ಈ ಬಗ್ಗೆ ಕೂಲಂಕಷ ಚರ್ಚೆ ನಡೆದಿತ್ತು. ಸಭೆಯಲ್ಲಿ ನಗರಸಭೆಯಿಂದ ನೀರಿನ ಲೆಕ್ಕಪತ್ರ (ಆಡಿಟಿಂಗ್) ಕೇಳಲಾಗಿತ್ತು.
ತನಿಖೆ ನಡೆಸಿದಾಗ ಉಡುಪಿಗೆ 15 ಲಕ್ಷ ಗ್ಯಾಲನ್ ನೀರು ಸರಬರಾಜು ಆಗುತ್ತಿತ್ತು. ಇದರಲ್ಲಿ 9 ಲಕ್ಷ ಗ್ಯಾಲನ್ ನೀರು ಮಾತ್ರ ಸಾರ್ವಜನಿಕರಿಗೆ ಲಭ್ಯವಿದ್ದು, ಉಳಿದ 6 ಲಕ್ಷ ಗ್ಯಾಲನ್ ನೀರಿನ ಲೆಕ್ಕವೇ ಇರಲಿಲ್ಲ. ತನಿಖೆ ನಡೆಸಿದಾಗ ಅದನ್ನು ಅನಧಿಕೃತವಾಗಿ ನಿರ್ಮಾಣ ಕಾಮಗಾರಿಗೆ ನೀಡುತ್ತಿ ರುವುದು ಗೊತ್ತಾಯಿತು. ಇದು ಬೆಳಕಿಗೆ ಬರುತಿದ್ದಂತೆಯೇ ಮರುದಿನದಿಂದಲೇ ಉಡುಪಿ ನಗರದ ನೀರಿನ ಸಮಸ್ಯೆ ಪರಿಹಾರವಾಗಿ ಧಾರಾಳ ನೀರು ಲಭಿಸು ವಂತಾಯಿತು ಎಂದು ಡಾ.ಶ್ಯಾನುಭಾಗ್ ವಿವರಿಸಿದರು.
ನಗರದ ಕೆಲವು ಹೊಟೇಲುಗಳಿಗೆ ಎರಡು-ಮೂರು ಸಂಪರ್ಕಗಳಿರುವುದು ನನಗೆ ಗೊತ್ತಿದೆ. ಈಗಲೂ ಅಂಥವು ಇರಬಹುದು. ಇದು ಅಧಿಕಾರಿಗಳಿಗೆ ಅರಿವಿದ್ದೇ ನಡೆಯುತ್ತಿರುತ್ತದೆ. ಇಂಥ ದುರುಪಯೋಗವನ್ನು ತಡೆಗಟ್ಟಬೇಕು.
ನಗರಕ್ಕೆ ನೀರು ಪೂರೈಸುವ ಸ್ವರ್ಣ ನದಿಯಿಂದ ಎಷ್ಟು ಪ್ರಮಾಣದಲ್ಲಿ ನೀರನ್ನು ತೆಗೆಯುತ್ತೇವೆ ಮತ್ತು ಎಷ್ಟು ನೀರು ಸರಬರಾಜು ಮಾಡುತ್ತೇವೆ ಎಂಬುದರ ಕುರಿತು ಸರಿಯಾದ ಮಾಹಿತಿ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಆದುದರಿಂದ ಸಂಬಂಧಪಟ್ಟವರು ಉಡುಪಿ ನಗರದ ನೀರಿನ ಆಡಿಟಿಂಗ್ ವರದಿಯನ್ನು ಸಾರ್ವಜನಿಕರಿಗೆ ನೀಡಬೇಕು. ಈ ಬಗ್ಗೆ ಜನರು ಇನ್ನು ಎಚ್ಚರ ಗೊಂಡಿಲ್ಲ. ನೀರಿನ ಬಳಕೆ ಕುರಿತು ಸಾರ್ವಜನಿಕ ಲೆಕ್ಕ ನೀಡುವಂತೆ ಒತ್ತಡ ಹಾಕುವ ಕಾರ್ಯ ಆಗಬೇಕು ಎಂದು ಡಾ.ಶಾನುಭಾಗ್ ಹೇಳಿದರು.