×
Ad

ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ: ದೂರು ದಾಖಲಿಸಲು ಚುನಾವಣೆ ಮುಗಿಯುವವರೆಗೆ ಕಾದ ಪೊಲೀಸರು

Update: 2019-05-08 20:52 IST

ಜೈಪುರ(ರಾಜಸ್ಥಾನ),ಮೇ 8: ಆಲ್ವಾರ್‌ನಲ್ಲಿ ವಾರದ ಹಿಂದೆ 18ರ ಹರೆಯದ ದಲಿತ ಮಹಿಳೆಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವು ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕವಷ್ಟೇ ಬೆಳಕಿಗೆ ಬಂದಿದೆ. ತಮಗೆ ಚುನಾವಣೆಯ ಕೆಲಸದ ಒತ್ತಡವಿರುವುದರಿಂದ ದೂರು ದಾಖಲಿಸಲು ಕಾಯುವಂತೆ ಪೊಲೀಸರು ತಮಗೆ ಸೂಚಿಸಿದ್ದಾಗಿ ಸಂತ್ರಸ್ತ ಮಹಿಳೆಯ ಕುಟುಂಬವು ಆರೋಪಿಸಿದ್ದರೆ,ಅತ್ತ ಪ್ರತಿಪಕ್ಷಗಳು ತನ್ನ ಗುಜ್ಜರ್ ಮತಬ್ಯಾಂಕನ್ನು ರಕ್ಷಿಸಿಕೊಳ್ಳಲು ಆಡಳಿತ ಕಾಂಗ್ರೆಸ್ ಮೌನವಾಗಿತ್ತು ಎಂದು ಹೇಳಿವೆ.

ರಾಜಸ್ಥಾನದಲ್ಲಿ ಮೊದಲ ಹಂತದ ಮತದಾನಕ್ಕೆ ಮೂರು ದಿನ ಮೊದಲು ಎ.26ರಂದು ಈ ಘಟನೆ ನಡೆದಿತ್ತು. ಸಂತ್ರಸ್ತ ಮಹಿಳೆ ತನ್ನ ಪತಿಯೊಂದಿಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಥಾನಾಗಾಜಿ-ಆಲ್ವಾರ್ ಬೈಪಾಸ್‌ನಲ್ಲಿ ಅವರನ್ನು ಅಡ್ಡಗಟ್ಟಿದ ಐವರ ಗುಂಪು ಇಬ್ಬರನ್ನೂ ನಿರ್ಜನ ಸ್ಥಳಕ್ಕೆ ಎಳೆದೊಯ್ದು,ಪತಿಯ ಎದುರೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು.

  ತಮ್ಮ ಅಪರಾಧ ಕೃತ್ಯವನ್ನು ವೀಡಿಯೊ ಚಿತ್ರೀಕರಿಸಿಕೊಂಡಿದ್ದ ದುಷ್ಕರ್ಮಿಗಳು ,10,000 ರೂ.ನೀಡುವಂತೆ ಇಲ್ಲದಿದ್ದರೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಮಹಿಳೆಗೆ ಬ್ಲಾಕ್ ಮೇಲ್ ಕೂಡ ಮಾಡಿದ್ದರು. ಚುನಾವಣೆಯ ನೆಪ ಹೇಳಿ ಎಫ್‌ಐಆರ್ ದಾಖಲಿಸಲು ದಂಪತಿ ಕಾಯುವಂತೆ ಮಾಡಿದ್ದ ಪೊಲೀಸರು ಆರೋಪಿಗಳು ಬ್ಲಾಕ್ ಮೇಲ್ ಮಾಡುತ್ತಿರುವ ಬಗ್ಗೆ ದೂರಿಕೊಂಡರೂ ಸ್ಪಂದಿಸಿರಲಿಲ್ಲ.

 ‘ಅವರು ವೀಡಿಯೊ ಅಪ್‌ಲೋಡ್ ಮಾಡಿದರೆ ನಾವು ಎಫ್‌ಐಆರ್‌ನಲ್ಲಿ ಇನ್ನೊಂದು ಕಲಂ ಸೇರಿಸುತ್ತೇವೆ’ಎಂದು ಠಾಣಾಧಿಕಾರಿ ತಿಳಿಸಿದ್ದಾಗಿ ಮಹಿಳೆಯ ಪತಿ ದೂರಿದ್ದಾರೆ. ದುಷ್ಕರ್ಮಿಗಳು ಕೊನೆಗೂ ಮೇ 4ರಂದು ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದರು.

ಈ ವಿಷಯ ಮಾಧ್ಯಮಗಳಲ್ಲಿ ವರದಿಯಾದ ಬಳಿಕ,ಮುಖ್ಯವಾಗಿ ಚುನಾವಣೆಗಳು ಮುಗಿದ ನಂತರ ಪೊಲೀಸರು ಸಂತ್ರಸ್ತೆಯ ಮನೆಗೆ ತನಿಖೆಗೆ ತೆರಳಿದ್ದರು. ಅಲ್ಲಿಗೆ ಘಟನೆ ನಡೆದು ಒಂದು ವಾರಕ್ಕೂ ಹೆಚ್ಚಿನ ಅವಧಿ ಕಳೆದಿತ್ತು.

ಛೋಟೆಲಾಲ ಅಲಿಯಾಸ್ ಸಚಿನ್,ಜೀತು,ಅಶೋಕ ಮತ್ತು ಇತರ ಇಬ್ಬರು ಸೇರಿದಂತೆ ಐವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಈ ಪೈಕಿ ಛೋಟೆಲಾಲ್ ಮತ್ತು ಅಶೋಕ ಗುಜ್ಜರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ತನ್ನ ಗುಜ್ಜರ್ ಮತಬ್ಯಾಂಕ್‌ನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಸರಕಾರವು ಘಟನೆಯನ್ನು ಮುಚ್ಚಿಟ್ಟಿತ್ತು ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಮದನ ಲಾಲ ಸೈನಿ ಅವರು,ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News