ಬಿಜೆಪಿಯಿಂದ ಪತ್ರಕರ್ತರಿಗೆ ಲಂಚ ಆರೋಪ: ತನಿಖೆಗೆ ಲೇಹ್ ಚುನಾವಣಾಧಿಕಾರಿ ಆದೇಶ

Update: 2019-05-08 15:48 GMT

ಹೊಸದಿಲ್ಲಿ,ಮೇ 8: ಜಮ್ಮುಕಾಶ್ಮೀರದ ಲೇಹ್‌ನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಬಿಜೆಪಿ ನಾಯಕರು ನಗದು ತುಂಬಿದ ಲಕೋಟೆಗಳನ್ನು ಪತ್ರಕರ್ತರಿಗೆ ಹಂಚಿದ್ದಾರೆಂಬ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಆ ಬಗ್ಗೆ ತನಿಖೆಗೆ ಜಿಲ್ಲಾ ಚುನಾವಣಾ ಕಚೇರಿ ಆದೇಶಿಸಿದೆ ಹಾಗೂ ಈ ವಿಷಯವಾಗಿ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ಅದು ನ್ಯಾಯಾಲಯವನ್ನು ಕೋರಿದೆ.

 ಪತ್ರಕರ್ತರಿಗೆ ಬಿಜೆಪಿಯು ಹಣ ತುಂಬಿದ ಲಕೋಟೆಗಳನ್ನು ವಿತರಿಸಲು ಯತ್ನಿಸುತ್ತಿದೆಯೆಂದು ಪ್ರೆಸ್ ಲೇಹ್ ಕ್ಲಬ್ ಶನಿವಾರ ಆರೋಪಿಸಿದೆ. ಆದರೆ ಬಿಜೆಪಿ ಆರೋಪವನ್ನು ನಿರಾಕರಿಸಿದೆ. ರಾಜಕೀಯ ದುರುದ್ದೇಶದಿಂದಾಗಿ ಈ ಆರೋಪ ಮಾಡಲಾಗಿದೆಯೆಂದು ಅದು ಹೇಳಿದೆ.

  ‘‘ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವಂತೆ ಮಂಗಳವಾರ ಲೇಹ್ ಜಿಲ್ಲಾ ಚುನಾವಣಾ ಕಚೇರಿಯು ಪೊಲೀಸರ ಮೂಲಕ ಜಿಲ್ಲಾ ನ್ಯಾಯಾಲಯಕ್ಕೆ ಈ ಬಗ್ಗೆ ದೂರು ಸಲ್ಲಿಸಿದೆ ಹಾಗೂ ಎಫ್‌ಐಆರ್ ದಾಖಲಿಸುವಂತೆ ಸೂಚನೆ ನೀಡಬೇಕೆಂದು ಕೋರಿತ್ತು. ಆದರೆ ಈವರೆಗೆ ನ್ಯಾಯಾಲಯವು ಯಾವುದೇ ಆದೇಶವನ್ನು ನೀಡಿಲ್ಲ’’ ಎಂದು ಲೇಹ್ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಅವ್ನಿ ಲಾವಸಾ ತಿಳಿಸಿದ್ದಾರೆ.

 ಲೇಹ್‌ನಲ್ಲಿ ಗುರುವಾರ ಹೊಟೇಲೊಂದರಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರವೀಂದರ್ ಶಾ ಪತ್ರಕರ್ತರಿಗೆ ಲಂಚ ನೀಡಲು ಯತ್ನಿಸಿದ್ದಾರೆಂದು ಲೇಹ್ ಪ್ರೆಸ್ ಕ್ಲಬ್ ಆಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News