×
Ad

ಪಡುಪೆರಾರ ಅಡಿಕೆ ಕಳವು ಪ್ರಕರಣ: ಆರೋಪಿ ಸೆರೆ

Update: 2019-05-08 21:24 IST

ಮಂಗಳೂರು, ಮೇ 8: ಬಜ್ಪೆ ಸಮೀಪದ ಪಡುಪೆರಾರ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಂಗಳವಾರ ಬಂಧಿಸಿದ ಬಜ್ಪೆ ಪೊಲೀಸರು, ಲಕ್ಷಾಂತರ ಮೌಲ್ಯದ ಸೊತ್ತನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ತಾಲೂಕಿನ ಪಡುಪೆರಾರ ನಿವಾಸಿ ಮಹೇಂದ್ರ ಯಾನೆ ಮಯ್ಯು (31) ಬಂಧಿತ ಆರೋಪಿ.

ಪ್ರಕರಣ 1: ಮಂಗಳೂರು ತಾಲೂಕಿನ ಪಡುಪೆರಾರ ಗೋಪಾಲಗೌಡರು ನೆರೆಯ ನರಸಿಂಹ ಪೆಜ್ಜತಾಯ ಎಂಬವರಿಂದ 2018-19ನೇ ಸಾಲಿನ ಅಡಿಕೆಯನ್ನು ಲೀಸ್ ಮೂಲಕ ಪಡೆದುಕೊಂಡಿದ್ದರು. ಲೀಸ್‌ನಲ್ಲಿ ಪಡೆದಿದ್ದ ಸುಮಾರು 26 ಅಡಿಕೆ ಗೋಣಿಗಳನ್ನು ತನ್ನ ಮನೆಯ ಅಂಗಳದಲ್ಲಿ ಒಣಗಿಸಲು ಹಾಕಿದ್ದರು. ಮಳೆ ಬರುವ ಕಾರಣ ಎ. 9ರಂದು ಸಂಜೆ 6 ಗಂಟೆಗೆ ಅಡಿಕೆ ತುಂಬಿದ್ದ 10 ಗೋಣಿಚೀಲಗಳನ್ನು ಮನೆಯ ಎದುರಿ ನಲ್ಲಿರುವ ಜಗಲಿಯಲ್ಲಿ ಇರಿಸಿದ್ದರು. ಇನ್ನುಳಿದ 16 ಗೋಣಿಚೀಲಗಳನ್ನು ಮನೆಯ ಹಿಂಬದಿ ಶೆಡ್‌ನಲ್ಲಿ ಕಟ್ಟಿ ಇರಿಸಿದ್ದರು.

ಮರುದಿನ ಬೆಳಗ್ಗೆ 6 ಗಂಟೆಗೆ ಗೋಪಾಲಗೌಡರು ಎದ್ದು ನೋಡಿದಾಗ ಮನೆಯ ಮುಂಬದಿ ಮತ್ತು ಹಿಂಬದಿ ಶೆಡ್‌ನಲ್ಲಿ ಅಡಿಕೆ ತುಂಬಿಟ್ಟಿದ್ದ 26 ಗೋಣಿ ಚೀಲಗಳು ಕಳವಾಗಿದ್ದವು.

ಪ್ರಕರಣ 2: ಪಡುಪೆರಾರದ ಪಿ.ಕೆ. ಹರಿ ಶಿಬರಾಯ ಎಂಬವರು ಎಪ್ರಿಲ್ 23ರಂದು ಮುಂಬೈಗೆ ಹೋಗಿದ್ದು,ಮೇ 6ರಂದು ಮನೆಗೆ ಹಿಂದಿರು ಗಿದ್ದಾರೆ. ಮನೆಬದಿಯ ಶೆಡ್ಡಿನಲ್ಲಿದ್ದ ಸುಮಾರು ಮೂರು ಕ್ವಿಂಟಾಲ್ ತೂಕದ 9 ಗೋಣಿ ಅಡಿಕೆ ಚೀಲಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಜ್ಪೆ ಠಾಣಾ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿ ವಶಕ್ಕೆ ಪಡೆಯಲಾಯಿತು.

ಆರೋಪಿಯನ್ನು ವಿಚಾರಣೆ ನಡೆಸಿದಾಗ ಆತನು ಈ ಎರಡೂ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದು, ನಂತರ ಆತನು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ ಮತ್ತು ಮಂಗಳೂರಿನ ಬಂದರಿನ ಅಡಿಕೆ ವ್ಯಾಪಾರಸ್ಥರಿಗೆ ಮಾರಾಟ ಮಾಡಿದ್ದ ಒಟ್ಟು ಸುಮಾರು 600 ಕೆ.ಜಿ ಅಡಿಕೆಯನ್ನು ಮತ್ತು ಕಳವು ಮಾಡಿದ ಅಡಿಕೆಯನ್ನು ಸಾಗಿಸಿದ ಪೋರ್ಡ್ ಕಾರ್‌ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಸುಮಾರು 1,20,000 ರೂ. ಮೌಲ್ಯದ 600 ಕೆ.ಜಿ ಅಡಿಕೆಯನ್ನು ಹಾಗೂ 10 ಲಕ್ಷ ಮೌಲ್ಯದ ಕಾರು ಸೇರಿ ಒಟ್ಟು 11,20,000 ಮೌಲ್ಯದ ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್, ಎಸಿಪಿ ಶ್ರೀನಿವಾಸ ಗೌಡ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಎಸ್.ಪರಶಿವಮೂರ್ತಿ, ಪೊಲೀಸ್ ಉಪನಿರೀಕ್ಷಕಿ ಪದ್ಮಾ ದೇವಳಿ, ಪ್ರೊಬೇಶನರು ಪಿಎಸ್‌ಐ ಪುನೀತ್ ಗಾಂವಕರ್, ಎಎಸ್‌ಐ ಜನಾದರ್ ನ ಗೌಡ, ದೇವು ಶೆಟ್ಟಿ, ಮುಹಮ್ಮದ್ ಸಿಬ್ಬಂದಿ ಹೊನ್ನಪ್ಪ ಗೌಡ, ಚಂದ್ರಮೋಹನ್, ಭರತ್, ಪ್ರೇಮಾನಂದ, ಮಂಜುನಾಥ, ಸುನೀಲ, ಲಕ್ಷ್ಮಣ ಸಾಲೋಟಗಿ, ಕುಮಾರಸ್ವಾಮಿ, ಹರಿಪ್ರಸಾದ, ಸತೀಶ, ಉಮೇಶ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News