ದಿಗ್ವಿಜಯ್‌ಸಿಂಗ್ ರೋಡ್‌ಶೋನಲ್ಲಿ ಪಾಲ್ಗೊಂಡ ನೂರಾರು ಸಾಧುಗಳು
ಭೋಪಾಲ್,ಮೇ 8: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್‌ಸಿಂಗ್ ಬುಧವಾರ ನಡೆಸಿದ ರೋಡ್‌ಶೋನಲ್ಲಿ ನೂರಾರು ಸಾಧುಗಳು ಪಾಲ್ಗೊಂಡು, ‘‘ಜೈಶ್ರೀರಾಮ್’’ ಘೋಷಣೆಗಳನ್ನು ಕೂಗಿದರು. ಬಿಜೆಪಿಯು ಚುನಾವಣೆಯಲ್ಲಿ ಬಳಸಿಕೊಳ್ಳುತ್ತಿರುವ ‘ಹಿಂದುತ್ವ ಕಾರ್ಡ್’ಗೆ ಪ್ರತಿ ಅಸ್ತ್ರವಾಗಿ ಕಾಂಗ್ರೆಸ್ ಅನುಸರಿಸಿದ ನಡೆ ಇದಾಗಿದೆಯಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ಭೋಪಾಲ್‌ನ ಭವಾನಿಚೌಕದಿಂದ ಲಾಲ್ ಪರೇಡ್ ಮೈದಾನದವರೆಗೆ ನಡೆದ ರ್ಯಾಲಿಯಲ್ಲಿ ದಿಗ್ವಿಜಯ್ ಸಿಂಗ್ ಅವರು ‘ಕಂಪ್ಯೂಟರ್ ಬಾಬಾ’ ಎಂದೇ ಜನಪ್ರಿಯರಾಗಿರುವ ಧಾರ್ಮಿಕ ನಾಯಕ ನಾಮದೇವ್ ತ್ಯಾಗಿ ಜೊತೆಗೆ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸಿ ಮತಯಾಚಿಸಿದರು.
ದಿಗ್ವಿಜಯ್‌ಸಿಂಗ್ ಅವರನ್ನು ಬೆಂಬಲಿಸಿ ಚುನಾವಣಾ ಪ್ರಚಾರ ನಡೆಸಿದ ಕೇಸರಿ ಹಾಗೂ ಶ್ವೇತ ಉಡುಪುಧಾರಿಗಳಾದ ಸಂತರು ಕಾಂಗ್ರೆಸ್ ಹಾಗೂ ಕೇಸರಿ ಧ್ವಜಗಳನ್ನು ಹಿಡಿದು ‘ಜೈಶ್ರೀರಾಮ್’ ಘೋಷಣೆಗಳನ್ನು ಕೂಗಿದರು. ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸಾಧ್ವಿ ಪ್ರಜ್ಞಾ ಠಾಕೂರ್ ಸ್ಪರ್ಧಿಸುತ್ತಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರವು ತುರ್ತಾಗಿ ನಿರ್ಮಾಣವಾಗಬೇಕೆಂಬುದೇ ತಮ್ಮ ಬೇಡಿಕೆಯಾಗಿದೆಯೆಂದು ರೋಡ್‌ಶೋದಲ್ಲಿ ಪಾಲ್ಗೊಂಡಿದ್ದ ಕೆಲವು ಸಾಧುಗಳು ತಿಳಿಸಿದರು.
ರೋಡ್‌ಶೋದಲ್ಲಿ ಕೆಲವು ಮಹಿಳಾ ಹಾಗೂ ಪುರುಷ ಪೊಲೀಸ್ ಸಿಬ್ಬಂದಿ ಕೂಡಾ ಕೇಸರಿ ಶಾಲುಗಳನ್ನು ಧರಿಸಿದ್ದರು. ಮಂಗಳವಾರದಂದು ನೂರಾರು ಸಾಧುಗಳು ಭೋಪಾಲ್‌ಗೆ ಆಗಮಿಸಿ, ಸಿಂಗ್ ಪರವಾಗಿ ಮತಯಾಚಿಸಿದ್ದರು.
ಇತ್ತೀಚೆಗೆ ಕಾಂಗ್ರೆಸ್ ಸರಕಾರದಿಂದ ನದಿ ಟ್ರಸ್ಟ್‌ನ ಅಧ್ಯಕ್ಷರಾಗಿ ನೇಮಕಗೊಂಡ ಕಂಪ್ಯೂಟರ್ ಬಾಬಾ ಅವರು ಮಂಗಳವಾರ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡುತ್ತಾ, ಬಿಜೆಪಿ ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಅದಕ್ಕೆ ರಾಮಮಂದಿರ ನಿರ್ಮಿಸಲು ಸಾಧ್ಯವಾಗಿಲ್ಲ ಎಂದರು. ರಾಮಮಂದಿರ ಇಲ್ಲದಿದ್ದಲ್ಲಿ ಮೋದಿಯೂ ಇಲ್ಲ ಎಂದು ಕಂಪ್ಯೂಟರ್ ಬಾಬಾ ಹೇಳಿದರು.
ಭೋಪಾಲ್ ಲೋಕಸಭಾ ಕ್ಷೇತ್ರಕ್ಕೆ ಮೇ 12ರಂದು ಚುನಾವಣೆ ನಡೆಯಲಿದೆ.