ಕೇಂದ್ರದಲ್ಲಿ ‘ಯುಪಿಎ ಪ್ಲಸ್’ ಸರಕಾರ ರಚನೆ: ಜ್ಯೋತಿರಾದಿತ್ಯ ಆಶಾವಾದ
ಹೊಸದಿಲ್ಲಿ,ಮೇ 8: 2019ರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯಲಾರದೆಂದು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಭವಿಷ್ಯ ನುಡಿದಿದ್ದಾರೆ. ತನ್ನ ಪಕ್ಷವು ಸಮಾನಮನಸ್ಕ ಪಕ್ಷಗಳ ಜೊತೆಗೂಡಿ ಬಲಿಷ್ಠ ಮೈತ್ರಿಕೂಟವನ್ನು ರಚಿಸುವ ಮೂಲಕ ಕೇಂದ್ರದಲ್ಲಿ ‘ಯುಪಿಎ ಪ್ಲಸ್’ ಸರಕಾರವನ್ನು ಸ್ಥಾಪಿಸಲಿದೆಯಂದು ಅವರು ಹೇಳಿದ್ದಾರೆ.
ಸಮ್ಮಿಶ್ರ ಸರಕಾರಗಳ ದಿನಗಳು ಇದೀಗ ಬಂದಿವೆಯೆಂದು ಮಧ್ಯಪ್ರದೇಶದ ಗುನಾ-ಶಿವಪುರಿ ಕ್ಷೇತ್ರದಿಂದ ಐದನೆ ಬಾರಿಗೆ ಲೋಕಸಭೆಗೆ ಸ್ಪರ್ಧಿಸುತ್ತಿರುವ ಜ್ಯೋತಿರಾದಿತ್ಯ ಹೇಳಿದ್ದಾರೆ. ಏಳು ಹಂತದ ಲೋಕಸಭಾ ಚುನಾವಣೆಯ ಐದನೆ ಹಂತವು ಮುಗಿದ ಬಳಿಕ, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೇರುವ ಸಾಧ್ಯತೆ ಎಷ್ಟರ ಮಟ್ಟಿಗಿದೆಯೆಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಪಕ್ಷವು ಗೆಲ್ಲಲಿರುವ ಸೀಟುಗಳ ಪ್ರಮಾಣವನ್ನು ನಾನು ಯಾವತ್ತೂ ಲೆಕ್ಕಹಾಕಿಲ್ಲ. ಆದರೆ ದೇಶದ ಜನತೆಯ ಮನಸ್ಥಿತಿಯು ಹಾಲಿ ಬಿಜೆಪಿ ಆಡಳಿತದ ವಿರುದ್ಧವಾಗಿದೆ’’ಎಂದು ಹೇಳಿದರು.
‘‘ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಯುಪಿಎ ಮೈತ್ರಿಕೂಟ ಸರಕಾರವನ್ನು ರಚಿಸಲಿದೆ ಹಾಗೂ ಸಮ್ಮಿಶ್ರ ಸರಕಾರವಾಗಿ ನಮ್ಮ ಕಾರ್ಯನಿರ್ವಹಣೆಯ ಬಗ್ಗೆ ನನಗೆ ತುಂಬಾ ಆತ್ಮವಿಶ್ವಾಸವಿದೆ’’ ಎಂದು ಜ್ಯೋತಿರಾದಿತ್ಯ ಅಭಿಪ್ರಾಯಿಸಿದರು.
‘‘ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರದಿಂದ ತಮಗಾದ ಅನ್ಯಾಯಕ್ಕೆ ಸೂಕ್ತ ಉತ್ತರ ನೀಡಲು ಭಾರತದ ಜನತೆಯು ಕಾಯುತ್ತಿದ್ದರೆಂದು ನಾನು ಭಾವಿಸಿದ್ದೇನೆ’’ ಎಂದವರು ಹೇಳಿದರು.
ಬಿಜೆಪಿ ಅಥವಾ ಕಾಂಗ್ರೆಸ್ ಅಥವಾ ಇನ್ನಾವುದೇ ಪಕ್ಷವಾಗಲಿ, ಈ ಸಲದ ಲೋಕಸಭಾ ಚುನಾವಣೆಯಲ್ಲಿ ನಿಚ್ಚಳ ಬಹುಮತವನ್ನು ಪಡೆಯಲಾರದು ಎಂದು ಜ್ಯೋತಿರಾದಿತ್ಯ ತಿಳಿಸಿದರು.
ದೇಶದಲ್ಲಿ ಕಳೆದ 25-30 ವರ್ಷಗಳಿಂದ ನಡೆದುಕೊಂಡು ಬಂದಿರುವಂತೆ ಈ ಬಾರಿ, ಕೇಂದ್ರದಲ್ಲಿ ಸಮ್ಮಿಶ್ರ ಸರಕಾರವು ಅಧಿಕಾರಕ್ಕೇರಲಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಅಭಿವೃದ್ಧಿಗೆ ಸಂಬಂಧಿಸಿದ ವಿಷಯದಲ್ಲಿ ಬಿಜೆಪಿಗೆ ಹೇಳಿಕೊಳ್ಳಲು ಏನೂ ಇಲ್ಲವಾದ್ದರಿಂದ ಅದು ರಾಷ್ಟ್ರೀಯವಾದಕ್ಕೆ ಸಂಬಂಧಿಸಿದ ವಿಷಯಗಳನ್ನು ಆಲಾಪಿಸುತ್ತಿದೆಯೆಂದು ಅವರು ಹೇಳಿದರು.
‘‘ಕಳೆದ ಸಲ ಅವರು ಅಧಿಕಾರದಲ್ಲಿದ್ದಾಗ ಭಾರತ ಪ್ರಕಾಶಿಸುತ್ತಿದೆಯೆಂಬ ಘೋಷಣೆ ಕೂಗಿದರು. ಭಾರತವು ಬಿಜೆಪಿಯ ಪಾಲಿಗೆ ಮಾತ್ರವೇ ಪ್ರಕಾಶಿಸಿತ್ತೇ ಹೊರತು, ದೇಶದ ಉಳಿದ ಜನರಿಗಲ್ಲ’’ ಎಂದು ಜ್ಯೋತಿರಾದಿತ್ಯ ವ್ಯಂಗ್ಯವಾಡಿದರು.