ಮನೆಗೆ ನುಗ್ಗಿ ಸೊತ್ತು ಕಳವು
Update: 2019-05-08 22:46 IST
ಕುಂದಾಪುರ, ಮೇ 8: ಕಾರ್ವಾಡಿ ಗ್ರಾಮದ ಮುಳ್ಳುಗುಡ್ಡೆ ಎಂಬಲ್ಲಿ ಮೇ 7ರಂದು ಬೆಳಗ್ಗೆ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ನಾಗಾರಾಜ ನಾಯ್ಕ ಬೆಳಗ್ಗೆ 7.30ರ ಸುಮಾರಿಗೆ ಮನೆಗೆ ಬೀಗ ಹಾಕಿ ಫ್ಯಾಕ್ಟರಿ ಕೆಲಸಕ್ಕೆ ತಮ್ಮಂದಿರು ಹಾಗೂ ತಂಗಿಯರೊಂದಿಗೆ ಹೋಗಿದ್ದು ವಾಪಾಸ್ಸು ಬೆಳಗ್ಗೆ 11:30 ಗಂಟೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಮಾಡಿನ ಹೆಂಚು ತೆಗೆದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ಮೂರು ಜೊತೆ ಚಿನ್ನದ ಬೆಂಡೋಲೆ, ಒಂದು ಚಿನ್ನದ ಮೂಗುತಿಬೊಟ್ಟು, ಇಸ್ತ್ರಿ ಪೆಟ್ಟಿಗೆ, ಎರಡು ಜೊತೆ ಬೆಳ್ಳಿಯ ಕಾಲು ಚೈನ್, 15,000ರೂ. ನಗದು ಕಳವುಗೈದಿದ್ದಾರೆ. ಇವುಗಳ ಒಟ್ಟು ಮೌಲ್ಯ 64,900ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.