ಕದ್ರಿ ಕ್ಷೇತ್ರದಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ

Update: 2019-05-09 11:54 GMT

ಮಂಗಳೂರು, ಮೇ 9: ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತ ಸಮೂಹದ ನಡುವೆ ಗುರುವಾರ ಸಂಭ್ರಮದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಿತು.

ಕದ್ರಿ ಮಠಾಧೀಶರಾದ ರಾಜಾನಿರ್ಮಲನಾಥ್ ಜೀ ಉಪಸ್ಥಿತಿಯಲ್ಲಿ ದೇರೆಬೈಲ್ ಬ್ರಹ್ಮಶ್ರೀವಿಠಲದಾಸ್ ತಂತ್ರಿಗಳ ನೇತೃತ್ವದಲ್ಲಿ ಬೆಳಗ್ಗೆ ಬ್ರಹ್ಮಕಲಶಾಭಿಷೇಕ ವಿಧಿವಿಧಾನಗಳು ಆರಂಭವಾಯಿತು. 9.35ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ದೇವರಿಗೆ ಮಹಾಪೂಜೆ ನಡೆಯಿತು.

ಕದ್ರಿ ಮಂಜುನಾಥ ದೇವರ ಬ್ರಹ್ಮಕಲಶೋತ್ಸವದಲ್ಲಿ ಪ್ರಧಾನ ದೇವರು ಸೇರಿದಂತೆ ತ್ರಿಲೋಕೇಶ್ವರ, ಮಚ್ಛೇಂದ್ರನಾಥ, ಗೋರಕ್ಷನಾಥ, ತೌರಂಗಿನಾಥ, ವ್ಯಾಸ, ಬುದ್ಧ, ನವಗ್ರಹಗಳಿಗೆ ಕಲಶಾಭಿಷೇಕ ನಡೆದಿದ್ದು ಒಟ್ಟು 1008 ಕಳಸದಿಂದ ಅಭಿಷೇಕ ನಡೆಯಿತು.

ಕದ್ರಿ ಮಂಜುನಾಥ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ಜನಾರ್ದನ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ರಾಘವೇಂದ್ರ ಭಟ್, ರಂಜನ್‌ಕುಮಾರ್ ಬಿ.ಎಸ್., ಚಂದ್ರಕಲಾ ದೀಪಕ್, ಪುಷ್ಪಲತಾ ಶೆಟ್ಟಿ, ಹರಿನಾಥ ಜೋಗಿ, ದಿನೇಶ್ ದೇವಾಡಿಗ, ಸುರೇಶ್ ಕುಮಾರ್ ಕದ್ರಿ, ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಗಣೆಶ್ ಶೆಟ್ಟಿ, ಕದ್ರಿ ನವನೀತ್ ಶೆಟ್ಟಿ, ಗೋಕುಲ್ ಕದ್ರಿ, ಪುರುಷೋತತಿಮ ಕೊಟ್ಟಾರಿ, ನಿವೇದಿತಾ ಎನ್. ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರಾ, ವಾಸುದೇವ ರಾವ್ ಕುಡುಪು ಉಪಸ್ಥಿತರಿದ್ದರು.

ಮಹಾದಂಡರುದ್ರಾಭಿಷೇಕ
ಕದ್ರಿ ಕ್ಷೇತ್ರದಲ್ಲಿ ಮೇ 10ರಂದು ಬೆಳಗ್ಗೆ 5.30ರಿಂದ ಪುಣ್ಯಾಹ, ಕವಾಟೋದ್ಘಾಟನೆ, ಗಣಯಾಗ, ಅಮೃತೇಶ್ವರಿ ಪೂಜೆ, ಮಹಾದಂಡರುದ್ರಾಭಿಷೇಕ ಪ್ರಾರಂಭವಾಗಲಿದೆ. ಬಳಿಕ ಮಹಾರುದ್ರಯಾಗ, ಪೂರ್ಣಾಹುತಿ, ಮಹಾಪೂಜೆ ನಡೆಯಲಿದೆ.
ಸಂಜೆ 4.00ರಿಂದ ಉಪ್ಪುಂದ ರಾಜೇಶ್ ಪಡಿಯಾರ್ ಮೈಸೂರು ತಂಡದಿಂದ ಸಿ. ಅಶ್ವಥ್ ಹಾಡಿರುವ ಗಾಯನ, 8.00ರಿಂದ ಕಲೈಲಾಮಣಿ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ ಬಳಗದಿಂದ ಸ್ಯಾಕ್ಸೋಫೋನ್ ಕಛೇರಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News