ಮೇ 11: ವಿವೇಕಾನಂದ ಕಾಲೇಜ್‍ನಲ್ಲಿ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ
ಪುತ್ತೂರು: ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ನವದೆಹಲಿ ಭಾರತೀಯ ತಾಂತ್ರಿಕ ಶಿಕ್ಷಣ ಸಂಘ ಮತ್ತು ಪುತ್ತೂರು ವಿವೇಕಾನಂದ ಸಂಶೋಧನಾ ಕೇಂದ್ರ ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ 'ಜ್ಞಾನ ಸಂಗಮ-2019' ಮೇ 11ರಂದು ಕಾಲೇಜಿನ ಶ್ರೀ ರಾಮ ಸಭಾಭವನದಲ್ಲಿ ನಡೆಯಲಿದೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಮ್.ಎಸ್. ಗೋವಿಂದೇಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅವರ ಪ್ರಾಜೆಕ್ಟ್ ಗೆ ಸಂಬಂದಿಸಿದಂತೆ ಪ್ರಬಂಧಗಳನ್ನು ಮಂಡಿಸುವುದರ ಮೂಲಕ ತಮ್ಮಲ್ಲಿರುವ ಹೊಸ ಹೊಸ ಆವಿಷ್ಕಾರಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದುದಕ್ಕೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಸಲುವಾಗಿ ಮತ್ತು ವಿದ್ಯಾರ್ಥಿಗಳಿಗೆ ಸಂಶೋಧನಾ ವಿಭಾಗದಲ್ಲಿ ಹೆಚ್ಚು ಆಸಕ್ತಿಯನ್ನು ಮೂಡಿಸುವುದರ ಜೊತೆಯಲ್ಲಿ ಅವರನ್ನು ಉತ್ತಮ ತಂತ್ರಜ್ಞರನ್ನಾಗಿಸುವ ಕುರಿತು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಷ್ಟ್ರಾದ್ಯಂತ ವಿವಿಧ ಕಾಲೇಜುಗಳ ಇಂಜಿನಿಯರಿಂಗ್ ಹಾಗೂ ಎಂಬಿಎ ವಿಭಾಗದ ಸುಮಾರು 600 ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ವಿಭಾಗಗಳಲ್ಲಿ ಒಟ್ಟು 80 ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಅಲ್ಲದೆ ಪ್ರಾಜೆಕ್ಟ್ ಗಳಿಗೆ ಸಂಬಂಧಪಟ್ಟ 100ಕ್ಕೂ ಹೆಚ್ಚು ಪೋಸ್ಟರ್ ಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದ್ದು, ಇಲ್ಲಿ ಮಂಡಿಸಲ್ಪಡುವ ಎಲ್ಲಾ ಪ್ರೌಢ ಪ್ರಬಂಧಗಳನ್ನು ಮುದ್ರಿಸಿ ಸಂಚಿಕೆಯ ರೂಪದಲ್ಲಿ ಪ್ರಕಟಿಸಿ ಬಿಡುಗಡೆಗೊಳಿಸಲಾಗುವುದು ಎಂದರು.
ಸಭಾ ಕಾರ್ಯಕ್ರಮ ಜ್ಞಾನ ಸಂಗಮ-2019ರ ಉದ್ಘಾಟನಾ ಸಮಾರಂಭವು ಬೆಳಗ್ಗೆ 9.30ಕ್ಕೆ ನಡೆಯಲಿದ್ದು, ಮಂಗಳೂರಿನ ಎ.ಜೆ. ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮಾಹಿತಿ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಡಾ. ನಾಗೇಶ್ ಎಚ್.ಆರ್. ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಟ ಡಿ. ಕಲ್ಲಾಜೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದ್ದು, ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಡಾ. ಶ್ರೀರಂಗ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಮ್.ಎಸ್. ಗೋವಿಂದೇಗೌಡ ಅಧ್ಯಕ್ಷತೆ ವಹಿಸಲಿದ್ದು, ಸಂಚಾಲಕ ರಾಧಾಕೃಷ್ಣ ಭಕ್ತ, ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ಓಪನ್ ಡೇ-2019
ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ತಯಾರಿಸಿದ ಪ್ರಾಜೆಕ್ಟ್‍ಗಳ ಪ್ರದರ್ಶನ ಓಪನ್ ಡೇ-2019ನ್ನು ಮೇ 13ರಂದು ಏರ್ಪಡಿಸಲಾಗಿದೆ. ಬೆಳಗ್ಗೆ 9.30 ರಿಂದ ಸಂಜೆ 3ರ ವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳು ನಿರ್ಮಿಸಿದ ವಿವಿಧ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ಅಂದು ಬೆಳಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ. ಮಂಜುನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ ಡಿ. ಕಲ್ಲಾಜೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಅವಕಾಶವಿದೆ.
ಸುದ್ದಿಗೋಷ್ಠಿಯಲ್ಲಿ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ ಡಿ. ಕಲ್ಲಾಜೆ, ಕಾರ್ಯಕ್ರಮ ಸಂಯೋಜಕರಾದ ಪ್ರೊ. ರಜನಿ ರೈ ಬಿ., ಪ್ರೊ. ಪ್ರಭಾಕರ ಬಿ.ಕೆ. ಮತ್ತು ಮಾಧ್ಯಮ ವಿಭಾಗದ ಸಂಚಾಲಕ ಪ್ರೊ. ಆಶ್ಲಿ ಡಿಸೋಜ ಉಪಸ್ಥಿತರಿದ್ದರು.