ಮೀನು ಲಾರಿಗಳ ಉಪಟಳ: ಎಂಟು ವಾಹನ ವಶ
ಮಂಗಳೂರು, ಮೇ 9: ನಗರದಲ್ಲಿ ಮೀನು ನೀರಿನ ತ್ಯಾಜ್ಯ ರಸ್ತೆಗೆ ಚೆಲ್ಲುತ್ತಿದ್ದ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ನಗರ ಪೊಲೀಸರು ಎಂಟು ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಮೂರು, ಕಂಕನಾಡಿ ವ್ಯಾಪ್ತಿಯಲ್ಲಿ ಎರಡು, ಪಾಂಡೇಶ್ವರದಲ್ಲಿ ಮೂರು ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ.
ಹಸಿರು ಪೀಠದ ಆದೇಶದಲ್ಲಿ ತಿಳಿಸಿರುವಂತೆ ಮೀನಿನ ಲಾರಿಗಳ ತ್ಯಾಜ್ಯ ನೀರು ಯಾವುದೇ ಕಾರಣಕ್ಕೂ ರಸ್ತೆಗೆ ಬೀಳಬಾರದು, ಮೀನುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ರವಾನೆ ಮಾಡುವಾಗ ಕ್ರೇಟ್ ಬಳಸಬೇಕು. ಮಂಜುಗಡ್ಡೆ ನೀರು ಕೆಳಗೆ ಬೀಳುವಂತಿಲ್ಲ. ಒಂದು ಟನ್ ಮೀನು ಸಾಗಾಟ ಮಾಡುವ ವಾಹನದಲ್ಲಿ 50 ಲೀಟರ್ ತ್ಯಾಜ್ಯ ನೀರು ಸಂಗ್ರಹಕ್ಕೆ ಟ್ಯಾಂಕ್ ಹೊಂದಿರೇಕು ಎಂದು ಆದೇಶದಲ್ಲಿ ತಿಳಿಸಿತ್ತು.
ಪ್ರತಿ ಶುಕ್ರವಾರ ನಡೆಯುವ ಪೊಲೀಸ್ ಫೋನ್-ಇನ್ ಕಾರ್ಯಕ್ರಮದಲ್ಲಿ ಮೀನು ಲಾರಿಗಳ ತ್ಯಾಜ್ಯ ನೀರು ರಸ್ತೆಗೆ ಬಿದ್ದು ವಾಸನೆ ಬರುತ್ತಿರುವ ಬಗ್ಗೆ ಪದೇಪದೇ ದೂರುಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಮಿಷನರ್ ಮೀನು ಲಾರಿ ಮಾಲಕರ ಸಭೆ ಕರೆದು ಖಡಕ್ ಎಚ್ಚರಿಕೆ ನೀಡಿರುವುದಲ್ಲದೆ ವಾರದ ಹಿಂದೆ ನೋಟಿಸ್ ನೀಡಿದ್ದರು. ಆದರೂ ಕೆಲವು ವಾಹನಗಳಲ್ಲಿ ಯಥಾಸ್ಥಿತಿ ಮುಂದುವರಿದ ಕಾರಣ ಕಮಿಷನರ್ ಡಾ.ಸಂದೀಪ್ ಪಾಟೀಲ್ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು.