×
Ad

ಬಜೆ: ಡ್ರೆಡ್ಜಿಂಗ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Update: 2019-05-09 21:26 IST

ಉಡುಪಿ, ಮೇ 9: ನಗರಕ್ಕೆ ನೀರುಣಿಸುವ ಬಜೆ ಅಣೆಕಟ್ಟಿನ ಜಾಕ್‌ವೆಲ್ ಪ್ರದೇಶಕ್ಕೆ ಸ್ವರ್ಣ ನದಿಯ ಹಳ್ಳದಲ್ಲಿ ಅಲ್ಲಲ್ಲಿ ತುಂಬಿರುವ ನೀರನ್ನು ಹಾಯಿಸಲು ಭಂಡಾರಿಬೆಟ್ಟುನಲ್ಲಿ ನಡೆದಿರುವ ಡ್ರೆಡ್ಜಿಂಗ್ ಕಾಮಗಾರಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಇಂದು ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದೆರಡು ದಿನಗಳಿಂದ ಡ್ರೆಡ್ಜಿಂಗ್ ಕಾಮಗಾರಿ ನಿರಂತರವಾಗಿ ನಾಲ್ಕು ಪಂಪ್‌ಗಳ ನೆರವಿನಿಂದ ನಡೆಯುತ್ತಿರುವುದರಿಂದ ಸಾಕಷ್ಟು ನೀರು ಬಜೆ ಅಣೆಕಟ್ಟಿನತ್ತ ಹರಿದು ಬರುತಿದ್ದು, ಇದರಿಂದ ಸುಮಾರು ಒಂದು ವಾರದ ಬಳಿಕ ಮತ್ತೆ ನೀರನ್ನು ಮೇಲೆತ್ತಿ ಶುದ್ಧೀಕರಿಸಿ ನಗರಕ್ಕೆ ಸರಬರಾಜು ಮಾಡುವ ಪ್ರಕ್ರಿಯೆ ಪ್ರಾರಂಭಗೊಂಡಿದೆ.

ನಿನ್ನೆ ಕೆಲವು ಪ್ರದೇಶಗಳಿಗೆ ನಳ್ಳಿ ನೀರನ್ನು ನೀಡಲಾಗಿದ್ದರೆ, ಇಂದು ಸಹ ಕೆಲವು ಪ್ರದೇಶಗಳಿಗೆ ನೀರು ಹರಿಸಲಾಗಿತ್ತು. ನಾಳೆಯೂ ನೀರು ಬಿಡುವ ಪ್ರದೇಶಗಳ ಮಾಹಿತಿಯನ್ನು ನಗರಸಭೆಯ ಪೌರಾಯುಕ್ತರು ಪ್ರಕಟಣೆಯ ಮೂಲಕ ನೀಡಿದ್ದಾರೆ.

ಸ್ವರ್ಣ ನದಿಯಲ್ಲಿ ಡ್ರೆಜ್ಜಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಸಾಕಷ್ಟು ನೀರು ಲಭ್ಯವಾಗಿದೆ. ಸದ್ಯಕ್ಕೆ ಜನರಿಗೆ ರೇಷನಿಂಗ್ ಮೂಲಕ ನೀರು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ನಗರಾಭಿವೃದ್ಧಿ ಕೋಶದ ಪಿ.ಡಿ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News