ಬಜೆ ಅಣೆಕಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಶ್ರಮದಾನ

Update: 2019-05-09 16:07 GMT

ಉಡುಪಿ, ಮೇ9: ಬಜೆ ಅಣೆಕಟ್ಟು ಪ್ರದೇಶದಲ್ಲಿ ನೀರಿನ ಸಂಗ್ರಹವಿದ್ದರೂ, ಅದರಲ್ಲಿ ಸಾಕಷ್ಟು ಕಸಕಡ್ಡಿ, ತ್ಯಾಜ್ಯ ಹಾಗೂ ಹೂಳುಗಳು ತುಂಬಿರುವ ಕಾರಣಕ್ಕೆ ನೀರು ಸರಿಯಾಗಿ ಉಪಯೋಗಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಇಂದು ಸಾರ್ವಜನಿಕರಿಂದ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಯಿತು.

ಉಡುಪಿ ನಗರಕ್ಕೀಗ ತೀವ್ರ ನೀರಿನ ಸಮಸ್ಯೆ ಎದುರಾಗಿದೆ. ಬಜೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಇದ್ದರೂ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇರುವ ನೀರನ್ನು ಕೂಡ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಶಾಸಕರ ಸೂಚನೆಯಂತೆ ಉಡುಪಿಯ ನಾಗರಿಕರು ಕೂಡ ಇಂದಿನ ಶ್ರಮದಾನದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ರಘುಪತಿ ಭಟ್, ಬಜೆ ಡ್ಯಾಂನಲ್ಲಿ ನೀರಿನ ಸಮಸ್ಯೆ ಉಂಟಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಅನೇಕ ಬಾರಿ ಈ ಬಗ್ಗೆ ಗಮನಕ್ಕೆ ತಂದರು ಕೂಡ ಅವರು ಇತ್ತ ಗಮನ ಹರಿಸಲಿಲ್ಲ. ಅದರ ಪರಿಣಾಮವಾಗಿ ಇಂದು ನಾವು ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎಂದರು. ಅಲ್ಲದೇ ಈಗಾಗಲೇ ನಗರಸಭಾ ಸದಸ್ಯರು ಹಾಗೂ ನಾವೆಲ್ಲಾ ಸೇರಿ ಎಲ್ಲಾ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಬಜೆ ಡ್ಯಾಂಗೆ ನೀರು ಹರಿದು ಬರುವ ಪ್ರದೇಶಗಳಲ್ಲಿ ಅಡೆತಡೆ ಇದ್ದು ನೀರು ಸರಿಯಾಗಿ ಹರಿಯುತ್ತಿಲ್ಲ. ಅದಕ್ಕಾಗಿ ಇಂದು ನಾವು ಶ್ರಮದಾನದ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡುತ್ತಿದ್ದೇವೆ ಎಂದರು. ಶ್ರಮದಾನದಲ್ಲಿ ನಗರಸಭಾ ಸದಸ್ಯರು, ಕಾರ್ಯಕರ್ತರು ಮತ್ತು ನಾಗರಿಕರು ಭಾಗವಹಿಸಿದ್ದರು.

ಶುಕ್ರವಾರವೂ ಮುಂದುವರಿಕೆ: ನೀರಿನ ಸಮಸ್ಯೆಯನ್ನು ಆದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರಮದಾನ ನಡೆಯುತಿದ್ದು, ಇಂದು ಸಾಕಷ್ಟು ಕಸಕಡ್ಡಿ, ಕಲ್ಲು ಹಾಗೂ ಹೂಳನ್ನು ತೆರವುಗೊಳಿಸಲಾಗಿದೆ. ಇನ್ನೂ ಎರಡು ದಿನ ಶ್ರಮದಾನ ಮುಂದುವರಿಯಲಿದೆ. ನಾಗರಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನದಲ್ಲಿ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News