ಆದಾಯ ಬೆಂಬಲ ಯೋಜನೆಗಳು ಕೃಷಿ ಸಾಲ ಮನ್ನಾ ರಾಜ್ಯಗಳಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣ: ಆರ್‌ಬಿಐ

Update: 2019-05-09 16:18 GMT

ಹೊಸದಿಲ್ಲಿ,ಮೇ 9: ಆದಾಯ ಬೆಂಬಲ ಯೋಜನೆಗಳು ಮತ್ತು ಕೃಷಿ ಸಾಲ ಮನ್ನಾ ರಾಜ್ಯಗಳಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತವೆ ಎಂದು ಆರ್‌ಬಿಐ ಹೇಳಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್,ಉಪ ಗವರ್ನರ್‌ಗಳು ಮತ್ತು 15ನೇ ಹಣಕಾಸು ಆಯೋಗದ ಸದಸ್ಯರು ಪಾಲ್ಗೊಂಡಿದ್ದ ಸಭೆಯಲ್ಲಿ ಈ ಅಭಿಪ್ರಾಯವನ್ನು ಅದು ವ್ಯಕ್ತಪಡಿಸಿದೆ.

 ರಾಜ್ಯಗಳ ವಿತ್ತೀಯ ಕೊರತೆ 2019-20ರ ಮುಂಗಡಪತ್ರ ಅಂದಾಜುಗಳಲ್ಲಿ ಕಡಿಮೆಗೊಳ್ಳುವ ನಿರೀಕ್ಷೆಯಿತ್ತು. ಆದರೆ ಪರಿಷ್ಕೃತ ಅಂದಾಜುಗಳು ಮತ್ತು ವಾಸ್ತವಿಕ ಅಂದಾಜುಗಳಲ್ಲಿ ಗಣನೀಯ ವ್ಯತ್ಯಾಸವಿದೆ ಎಂದು ಹೇಳಿದ ಆರ್‌ಬಿಐ,ಜಿಡಿಪಿಯ ಶೇಕಡಾವಾರು ಲೆಕ್ಕದಲ್ಲಿ ಬಾಕಿಯಿರುವ ಸಾಲಗಳ ಪ್ರಮಾಣ ಹೆಚ್ಚುತ್ತಿದೆ ಎಂದು ತಿಳಿಸಿದೆ.

ರಾಜ್ಯ ಹಣಕಾಸು ಆಯೋಗಗಳ ಸ್ಥಾಪನೆ,ಸಾರ್ವಜನಿಕ ಕ್ಷೇತ್ರದ ಸಾಲಗಳು ಮತ್ತು ಹಣಕಾಸು ಆಯೋಗದ ಮುಂದುವರಿಕೆಯ ಬಗ್ಗೆಯೂ ದಾಸ್ ಪ್ರಸ್ತಾಪಿಸಿದರು. ರಾಜ್ಯಗಳ ವಿತ್ತೀಯ ನಿರ್ವಹಣೆ ಅಗತ್ಯಗಳಿಂದಾಗಿ ಆಯೋಗದ ಮುಂದುವರಿಕೆಯು ಅನಿವಾರ್ಯವಾಗಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ನಗದು ನಿರ್ವಹಣೆಯ ಕುರಿತೂ ಮಾತನಾಡಿದ ಆರ್‌ಬಿಐ,ತಮ್ಮ ನಗದು ಅಗತ್ಯಗಳನ್ನು ಮೊದಲೇ ನಿರ್ಧರಿಸುವ ರಾಜ್ಯಗಳ ಸಾಮರ್ಥ್ಯಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News