ಬೋಳಾರ್‌ನಲ್ಲಿ ಚೂರಿ ಇರಿತ ಪ್ರಕರಣ: ನಾಲ್ವರ ಬಂಧನ

Update: 2019-05-09 16:20 GMT

ಮಂಗಳೂರು, ಮೇ 9: ನಗರದ ಬೋಳಾರ್ ಹಾಲ್‌ವೊಂದರಲ್ಲಿ ನಡೆಸಿದ್ದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ನಂದಿಗುಡ್ಡೆ ಬಸ್ ತಂಗುದಾಣದ ಬಳಿ ಪಾಂಡೇಶ್ವರ ಪೊಲೀಸರು ಗುರುವಾರ ಮಧಾಹ್ನ ಬಂಧಿಸಿದ್ದಾರೆ.

ಬೋಳಾರದ ಪಾದೆಕಲ್ಲು ನಿವಾಸಿ ಜ್ಞಾನೇಶ್ ನಾಯಕ್(20), ಹೊಯ್ಗೆಬಝಾರ್ ನಿವಾಸಿಗಳಾದ ರಾಹುಲ್ ತಿಂಗಳಾಯ (25), ನಿತೇಶ್ ಯಾನೆ ಪಪ್ಸು (25), ಚರಣ್ (32) ಬಂಧಿತ ಆರೋಪಿಗಳು.

ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಚೂರಿ ಹಾಗೂ ಬಾಟಲಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹಳೆ ದ್ವೇಷದಿಂದ ಈ ಕೃತ್ಯ ನಡೆಸಿದ್ದಾರೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣ ವಿವರ: ಮೇ 6ರಂದು ರಾತ್ರಿ 10:30ಕ್ಕೆ ನಗರದ ಹೊಯ್ಗೆಬಜಾರ್‌ನ ಹಾಲ್‌ವೊಂದರಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಬೋಳಾರದ ಮಹೀಂದ್ರ ಶೆಟ್ಟಿ ಮತ್ತು ಸುರಾಗ್ ಶೆಟ್ಟಿ ಎಂಬವರಿಗೆ ಆರೋಪಿಗಳು ಚೂರಿಯಿಂದ ಇರಿದು, ಬಾಟಲಿಯಿಂದ ಹಲ್ಲೆ ನಡೆಸಿದ್ದರು. ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಕೈಗೊಳ್ಳಲಾಗಿತ್ತು.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್, ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ಹೆಗ್ಡೆ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕುಮಾರ್ ಆರಾಧ್ಯ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾಜೇಂದ್ರ ಬಿ. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News