ಈಗ ಪಕೋಡ ಮಾರಾಟವೇ ಲಭ್ಯವಿರುವ ಉದ್ಯೋಗ: ರಾಹುಲ್ ಗಾಂಧಿ
ಸಿರ್ಸಾ, ಮೇ 9: ನಿರುದ್ಯೋಗದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈಗ ಪಕೋಡ ಮಾರಾಟವೇ ಲಭ್ಯವಿರುವ ಉದ್ಯೋಗ ಎಂದು ವ್ಯಂಗ್ಯವಾಡಿದ್ದಾರೆ.
ಇಲ್ಲಿ ಗುರುವಾರ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ನಿರುದ್ಯೋಗ ಕಳೆದ 45 ವರ್ಷಗಳಲ್ಲೇ ಈಗ ಅತ್ಯಧಿಕ ಇದೆ. ಇದು ಮೋದಿ ಅವರ ಕೊಡುಗೆ ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸ್ಥಾಪಿಸಿದ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ ರಾಹುಲ್ ಗಾಂಧಿ, ಮೋದಿ ಅವರು ಆರಂಭದಲ್ಲಿ ಮೇಕ್ ಇನ್ ಇಂಡಿಯಾ, ಸ್ಮಾರ್ಟ್ ಅಪ್ ಇಂಡಿಯಾ ಯೋಜನೆ ಆರಂಭಿಸಿದರು, ಅನಂತರ ಸ್ಟಾಂಡ್ ಅಪ್ ಇಂಡಿಯಾ ಆರಂಭಿಸಿದರು. ಪಕೋಡದ ಮೂಲಕ ಕೊನೆಗೊಳಿಸಿದರು ಎಂದರು.
ಅವರು ಎಲ್ಲೆಲ್ಲಿ ಹೋಗುತ್ತಾರೋ, ಅಲ್ಲಿ ದ್ವೇಷ ಹರಡುತ್ತಾರೆ. ಹರ್ಯಾಣದಲ್ಲಿ ಎರಡು ಸಮುದಾಯದ ನಡುವೆ ಸಂಘರ್ಷ ಹುಟ್ಟು ಹಾಕುತ್ತಾರೆ. ತಮಿಳುನಾಡಿಗೆ ಹೋದರೆ, ಕೆಲವರನ್ನು ಟೀಕಿಸುತ್ತಾರೆ. ಮಹಾರಾಷ್ಟ್ರಕ್ಕೆ ಹೋದರೆ ಉತ್ತರಪ್ರದೇಶ, ಬಿಹಾರದ ಜನರ ವಿರುದ್ಧ ಮಾತನಾಡುತ್ತಾರೆ. ಒಂದು ಧರ್ಮದ ಜನರು ಇನ್ನೊಂದು ಧರ್ಮದ ಜನರೊಂದಿಗೆ ಸಂಘರ್ಷಕ್ಕಿಳಿಯುವಂತೆ ಮಾಡುತ್ತಾರೆ. ಇದರಿಂದ ನೀವು ಏನನ್ನು ಸಾಧಿಸುತ್ತೀರಿ ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
“ಕಳೆದ ಐದು ವರ್ಷಗಳಲ್ಲಿ ನೀವು ಏನು ಸಾಧನೆ ಮಾಡಿದ್ದೀರಿ ? ದೇಶಕ್ಕೆ ನೀವೇನು ನೀಡಿದ್ದೀರಿ ಎಂದು ನಾನು ಕೇಳಲು ಬಯಸುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದರು. ಪಕ್ಷ ಭರವಸೆ ನೀಡಿರುವ ಕನಿಷ್ಠ ಆದಾಯ ಖಾತರಿ ಯೋಜನೆ ನ್ಯಾಯ್‌ದಿಂದ ಮಧ್ಯಮ ವರ್ಗದವರಿಗೆ ಯಾವುದೇ ಹೊರೆ ಆಗದು. ದೇಶದ ಕಡು ಬಡ ಜನರಿಗೆ ವಾರ್ಷಿಕವಾಗಿ 72 ಸಾವಿರ ರೂಪಾಯಿ ಭರವಸೆಯನ್ನು ಈ ಯೋಜನೆ ನೀಡಿದೆ ಎಂದು ರಾಹುಲ್ ಗಾಂಧಿ ಹೇಳಿದರು.