ಶೌಚಗುಂಡಿ ಸ್ವಚ್ಛತೆ ವೇಳೆ ಕಾರ್ಮಿಕರ ಸಾವು ಪ್ರಕರಣ: ದಿಲ್ಲಿ ಸರಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್

Update: 2019-05-09 16:26 GMT

ಹೊಸದಿಲ್ಲಿ, ಮೇ9: ಇಲ್ಲಿನ ನಿರ್ಮಾಣ ಹಂತದ ಮನೆಯೊಂದರಲ್ಲಿ ಶೌಚಗುಂಡಿ ಸ್ವಚ್ಛಪಡಿಸುತ್ತಿದ್ದ ಸಂದರ್ಭ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಮಾನವಹಕ್ಕು ಆಯೋಗವು ದಿಲ್ಲಿ ಸರಕಾರ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಗುರುವಾರ ನೋಟಿಸ್ ಜಾರಿಗೊಳಿಸಿದೆ.

  ವಾಯುವ್ಯ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ಮಂಗಳವಾರ ಮಲಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಇಬ್ಬರು ಗುತ್ತಿಗೆ ಕಾರ್ಮಿಕರು ವಿಷಾನಿಲ ಸೇವನೆಯಿಂದಾಗಿ ಸಾವನ್ನಪ್ಪಿದ್ದರು, ಇತರ ಮೂವರು ಕಾರ್ಮಿಕರು ಗಂಭೀರವಾಗಿ ಅಸ್ವಸ್ಥಗೊಂಡಿದ್ದರು.

 ಅಡಳಿತದ ನಿರ್ಲಕ್ಷದಿಂದಾಗಿ ಪ್ರತಿ ವರ್ಷವೂ ಭಾರೀ ಸಂಖ್ಯೆಯ ಜನರು ಇಂತಹ ಧಾರುಣ ಘಟನೆಗಳಲ್ಲಿ ಸಾವಿಗೀಡಾ ಗುತ್ತಿದ್ದಾರೆಂದು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ಗುರುವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮಲಗುಂಡಿ ಸ್ವಚ್ಛತಾಕಾರ್ಯಕ್ಕೆ ಸಂಬಂಧಿಸಿ ನಿರ್ದಿಷ್ಟ ಕಾನೂನು ಹಾಗೂ ಮಾರ್ಗದರ್ಶಿ ಸೂತ್ರಗಳಿದ್ದರೂ, ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತಿರುವುದಾಗಿ ಎನ್‌ಎಚ್‌ಆರ್‌ಸಿ ಬೆಟ್ಟು ಮಾಡಿದೆ.

   ಘಟನಾ ಸ್ಥಳದಲ್ಲಿ ಜಮಾಯಿಸಿದ ಕೆಲವು ಜನರು,ಸಂತ್ರಸ್ತರನ್ನು ‘ಅಸ್ಪಶ್ಯರೆಂದು’ ಪರಿಗಣಿಸಿ ಅವರ ರಕ್ಷಣೆಗೆ ಬಾದೆ, ಅನಾಗರಿಕ ವರ್ತನೆಯನ್ನು ತೋರಿದ್ದಾರೆಂದು ಎನ್‌ಎಚ್‌ಆರ್‌ಸಿ ಖಂಡಿಸಿದೆ. ಮಲಗುಂಡಿಗಳ ಅನಧಿಕೃತ ನಿರ್ಮಾಣಕ್ಕಿರುವ ನಿಷೇಧ ಹಾಗೂ ಅಧಿಕೃತ ಮಲಗುಂಡಿಗಳ ಸ್ವಚ್ಛತೆಗೆ ಸಂಬಂಧಿಸಿ ಯಾವುದಾದರೂ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಲಾಗಿದೆಯೇ ಎಂಬ ಬಗ್ಗೆ ಅದು ದಿಲ್ಲಿ ಸರಕಾರದಿಂದ ವಿವರಣೆಯನ್ನು ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News