ರಾಜೀವ್ ವಿರುದ್ಧ ಮೋದಿ ಟೀಕೆಗೆ: ಪವಾರ್ ಅಸಮಾಧಾನ

Update: 2019-05-09 16:38 GMT

ಸತಾರ, ಮೇ9: ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರನ್ನು ನಂ.1 ಭ್ರಷ್ಟ ಎಂದು ಟೀಕಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು, ಎನ್‌ಸಿಪಿ ವರಿಷ್ಠ ಶರದ್ ಪವಾರ್ ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸತಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘’ಜೀವಂತವಿರದ ವ್ಯಕ್ತಿಯೊಬ್ಬರ ಬಗ್ಗೆ ಈ ರೀತಿ ಕೆಟ್ಟದಾಗಿ ಮಾತನಾಡುವುದು ಪ್ರಧಾನಿ ಹುದ್ದೆಗೆ ಶೋಭೆ ತರಲಾರದು” ಎಂದು ಹೇಳಿದ್ದಾರೆ.

ಕಳೆದ ಶನಿವಾರ ಉತ್ತರಪ್ರದೇಶದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮೋದಿಯವರು ಕಾಂಗ್ರೆಸ್‌ನ ದಿವಂಗತ ನಾಯಕ, ಮಾಜಿ ಪ್ರಧಾನಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಾ, ‘‘ ನಿಮ್ಮ ತಂದೆ (ರಾಜೀವ್ ಗಾಂಧಿ) ಅವರನ್ನು ಮಿ.ಕ್ಲೀನ್ ಎಂದು ಅವರ ಭಟ್ಟಂಗಿಗಳು ಕರೆದಿದ್ದರು. ಆದರೆ ಅವರ ಬದುಕು ‘ಭ್ರಷ್ಟಾಚಾರಿ’ ನಂ.1 ಆಗಿ ಸತ್ತರು” ಎಂದು ವ್ಯಂಗ್ಯವಾಡಿದ್ದರು.

ಇದರ ಜೊತೆಗೆ ಬುಧವಾರ ಮೋದಿ , ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ರಾಜೀವ್ ಪ್ರಧಾನಿಯಾಗಿದ್ದಾಗ ಭಾರತೀಯ ನೌಕಾಪಡೆಯ ಐಎನ್‌ಎಸ್ ಯುದ್ಧ ನೌಕೆಯನ್ನು ಗಾಂಧಿ ಕುಟುಂಬವು ಅದರ ‘ ಖಾಸಗಿ ವೈಯಕ್ತಿಕ ಟ್ಯಾಕ್ಸಿ’ಯಾಗಿ ಬಳಸಿಕೊಂಡಿತ್ತು ಎಂದು ಆರೋಪಿಸಿದ್ದರು.

ಮೋದಿಯವರ ಆರೋಪಗಳಿಗೆ ಇಂದಿಲ್ಲಿ ಪ್ರತಿಕ್ರಿಯಿಸಿದ ಪವಾರ್ ‘‘ ಆ ವ್ಯಕ್ತಿ (ರಾಜೀವ್‌ಗಾಂಧಿ) ಈಗ ಬದುಕಿಲ್ಲ. ಅವರ ಸಾವು ಎಲ್ಲರಿಗೂ ಅತ್ಯಂತ ಯಾತನಾಮಯವಾಗಿತ್ತು’’ ಎಂದರು.

 ಪ್ರಧಾನಿ ಹುದ್ದೆಗೇರಿದ ಗಾಂಧಿ ಕುಟುಂಬದ ಇಬ್ಬರು ಸದಸ್ಯರಾದ ಇಂದಿರಾ ಹಾಗೂ ರಾಜೀವ್ ಹತ್ಯೆಗೀಡಾದರು ಎಂದರು. ಇಂತಹ ದೊಡ್ಡ ತ್ಯಾಗವನ್ನು ಮಾಡಿದವರ ವಿರುದ್ಧ ಈ ರೀತಿ ಕೆಟ್ಟ ಭಾಷೆ ಬಳಸುವುದು ಪ್ರಧಾನಿಗೆ ಶೋಭೆ ತರಲಾರದು ಎಂದು ಮಾಜಿ ಕೇಂದ್ರ ಸಚಿವರೂ ಆದ ಶರದ್ ಪವಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News