ಚರಂಡಿಯಲ್ಲಿ ಇಳಿದಿದ್ದ ಏರ್‌ ಇಂಡಿಯಾ ವಿಮಾನ: ಕಾರಣ ಏನು ಗೊತ್ತೇ?

Update: 2019-05-10 04:22 GMT
ಫೈಲ್ ಚಿತ್ರ

ಹೊಸದಿಲ್ಲಿ, ಮೇ 10: ಅಬುಧಾಬಿಯಿಂದ ಕೊಚ್ಚಿನ್‌ಗೆ ಬರುತ್ತಿದ್ದ ಏರ್‌ ಇಂಡಿಯಾ ವಿಮಾನ 2017ರ ಸೆಪ್ಟೆಂಬರ್ 17ರಂದು ಭಾರಿ ಮಳೆ ಹಿನ್ನೆಲೆಯಲ್ಲಿ ತೆರೆದ ಚರಂಡಿಯಲ್ಲಿ ಇಳಿದಿತ್ತು. ವಿಮಾನದ ಹಿರಿಯ ಪೈಲಟ್ ಹಾಗೂ ಸಹ ಪೈಲಟ್ ನಡುವಿನ ವಯಸ್ಸಿನ ಅಂತರ ಇದಕ್ಕೆ ಕಾರಣ ಎಂಬ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ.

102 ಪ್ರಯಾಣಿಕರನ್ನು ಹೊಂದಿದ್ದ ವಿಮಾನ ತೆರೆದ ಚರಂಡಿಯಲ್ಲಿ ಇಳಿದಾಗ, ಮೂವರು ಗಾಯಗೊಂಡಿದ್ದರು ಹಾಗೂ ವಿಮಾನದ ಮುಂಬದಿ ಲ್ಯಾಂಡಿಂಗ್ ಗೇರ್ ಹಾಳಾದದ್ದು ಸೇರಿದಂತೆ ವಿಮಾನಕ್ಕೆ ಭಾರಿ ಪ್ರಮಾಣದ ಧಕ್ಕೆಯಾಗಿತ್ತು. ವಿಮಾನದ ಹಿರಿಯ ಪುರುಷ ಪೈಲಟ್, ತನಗಿಂತ 30 ವರ್ಷ ಕಿರಿಯಳಾದ ಸಹ ಪೈಲಟ್‌ನ ಸಲಹೆ ಅಥವಾ ಎಚ್ಚರಿಕೆಯನ್ನು ಕಡೆಗಣಿಸಿದ್ದರಿಂದ ವಿಮಾನ ತೆರೆದ ಚರಂಡಿಯಲ್ಲಿ ಇಳಿಯಬೇಕಾಯಿತು ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಮಾಡುವ ಸಲುವಾಗಿ ಪೈಲಟ್‌ಗಳ ನಡುವೆ ವಯಸ್ಸಿನ ಅಂತರ ಇಲ್ಲದಂತೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಿಗೆ ಪೈಲಟ್‌ ಗಳನ್ನು ನಿಯೋಜಿಸಬೇಕು ಎಂದು ವಿಮಾನಯಾನ ಅಧಿಕಾರಿಗಳು ಸಲಹೆ ಮಾಡಿದ್ದಾರೆ.

"ಒಂದು ಅಪಘಾತದ ಹಿಂದೆ ಕೇವಲ ಒಂದೇ ಕಾರಣ ಇರುವುದಿಲ್ಲ. ಈ ವರದಿಯಲ್ಲಿ ನಾವು ನಿಖರವಾದ ವಿವರಗಳನ್ನು ಪರಿಶೀಲಿಸಿದ್ದು, ಪೈಲಟ್ ಇನ್ ಕಮಾಂಡ್ ಕೈಗೊಂಡ ಅಸಮರ್ಪಕ ತೀರ್ಮಾನ ಬಹುಶಃ ಆಕಸ್ಮಿಕಕ್ಕೆ ಕಾರಣವಾಗಿರಬಹುದು. ಭಾರಿ ಮಳೆ ಮತ್ತು ಮಬ್ಬು ವಾತಾವರಣ ಕೂಡಾ ಇದಕ್ಕೆ ಪೂರಕ ಕಾರಣಗಳಿರಬಹುದು" ಎಂದು ವಿಮಾನಯಾನ ನಿರ್ದೇಶನಾಯಲದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ವಿಮಾನ ನಿಲ್ದಾಣದ ರನ್‌ವೇಯಲ್ಲಿ ಮಾಡಲಾದ ಗುರುತುಗಳು ಕಾಣಿಸುತ್ತಿಲ್ಲ. ಆದ್ದರಿಂದ ತೀರಾ ನಿಧಾನವಾಗಿ ಕೆಳಕ್ಕೆ ಇಳಿಯುವಂತೆ ಸಲಪೈಲಟ್ ಸಲಹೆ ನೀಡಿದ್ದರು. ಇದಾದ ತಕ್ಷಣ "ಫಾಲೊ ಮಿ" ವಾಹನದ ಮಾರ್ಗದರ್ಶನಕ್ಕೆ ಅನುಗುಣವಾಗಿ ವಿಮಾನವನ್ನು ಕೆಳಕ್ಕೆ ಇಳಿಸಲು ಈ ವಾಹನ ಕರೆಸುವಂತೆಯೂ ಸಲಹೆ ಕೊಟ್ಟಿದ್ದರು ಎಂದು ತಿಳಿದುಬಂದಿದೆ.

"ಆದಾಗ್ಯೂ ಪೈಲಟ್ ಇನ್ ಕಮಾಂಡ್ ಇದಕ್ಕೆ ಸ್ಪಂದಿಸಲಿಲ್ಲ. 2112ಯುಟಿಸಿಯಲ್ಲಿ ಎಫ್ ಟ್ಯಾಕ್ಸಿವೇಗಿಂತ 90 ಮೀಟರ್ ಮೊದಲೇ ವಿಮಾನ ತಿರುವು ಪಡೆದುಕೊಂಡು ಮಳೆನೀರಿನ ತೆರೆದ ಚರಂಡಿಯನ್ನು ಪ್ರವೇಶಿಸಿತು. ಚರಂಡಿಯಿಂದ ಮೇಲೇಳಲು ಮುಖ್ಯ ಪೈಲಟ್ ಮೂರು ಬಾರಿ ತ್ರೋಟಲ್ ಬಳಸಿದರು. ಆದರೆ ವಿಮಾನ ಚರಂಡಿಯಲ್ಲಿ ಸಿಕ್ಕಿಹಾಕಿಕೊಂಡಿತು. ತ್ರೋಟಲ್ ಬಳಕೆ ಮಾಡದಂತೆಯೂ ಸಹ ಪೈಲಟ್ ಸಲಹೆ ಮಾಡಿದ್ದರು" ಎಂದು ಡಿಜಿಸಿಎ ವರದಿ ಹೇಳಿದೆ.

ಪೈಲಟ್ ಹಾಗೂ ಸಹಪೈಲಟ್ ನಡುವೆ 30 ವರ್ಷ ವಯಸ್ಸಿನ ಅಂತರ ಇದ್ದು, ವಿಮಾನ ಚಾಲನೆ ಅನುಭವದಲ್ಲೂ 13 ಸಾವಿರ ಗಂಟೆಗಳ ವ್ಯತ್ಯಾಸ ಇತ್ತು ಎಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News