×
Ad

ಸಿಜೆಐ ಗೊಗೊಯಿ ಪ್ರಕರಣ ನಿಭಾಯಿಸಿದ ರೀತಿಯಲ್ಲಿ ಅಟಾರ್ನಿ ಜನರಲ್-ಕೇಂದ್ರದ ನಡುವೆ ಭಿನ್ನಮತ?

Update: 2019-05-10 16:49 IST

ಹೊಸದಿಲ್ಲಿ, ಮೇ 10:  ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನಿಭಾಯಿಸಿದ ರೀತಿ ಕುರಿತಂತೆ ಕೇಂದ್ರ ಸರಕಾರ ಹಾಗೂ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮಧ್ಯೆ ಗಂಭೀರ ಭಿನ್ನಾಭಣಿಪ್ರಾಯಗಳು ಸೃಷ್ಟಿಯಾಗಿವೆ ಎಂದು thewire.in ವರದಿ ಮಾಡಿದೆ.

ಸಿಜೆಐ ವಿರುದ್ಧದ ಆರೋಪಗಳ ತನಿಖೆಗೆ ರಚಿಸಲಾದ ಸುಪ್ರೀಂ ಕೋರ್ಟಿನ ಆಂತರಿಕ ಸಮಿತಿಯಲ್ಲಿ ಬಾಹ್ಯ ಸದಸ್ಯರೂ ಇರಬೇಕೆಂದು ಶಿಫಾರಸು ಮಾಡಿ ಅಟಾರ್ನಿ ಜನರಲ್ ಕಳೆದ ವಾರ  ಎಲ್ಲಾ ನ್ಯಾಯಾಧೀಶರುಗಳಿಗೆ ಪತ್ರ ಬರೆದಿದ್ದರು.  ಈ ಪ್ರಕರಣ ಕುರಿತಂತೆ ಸಿಜೆಐ ಗೊಗೊಯಿ ಅವರನ್ನು ಸಮರ್ಥಿಸಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಶೇಷವಾಗಿ ಉಲ್ಲೇಖಿಸಿದ್ದ ಸಂದರ್ಭ ವೇಣುಗೋಪಾಲ್ ಹಾಜರಿದ್ದರೂ ಅವರು ನ್ಯಾಯಾಧೀಶರುಗಳಿಗೆ ಪತ್ರ ಬರೆದು ಸಮಿತಿಯಲ್ಲಿ ಬಾಹ್ಯ ಸದಸ್ಯರು, ವಿಶೇಷವಾಗಿ ನಿವೃತ್ತ ಮಹಿಳಾ ನ್ಯಾಯಾಧೀಶರಿದ್ದರೆ ಹೆಚ್ಚು ಪಾರದರ್ಶಕ ತನಿಖೆ ನಡೆಸಬಹುದೆಂದು ಹೇಳಿದ್ದರು.

ಆದರೆ ಇದು ಕೇಂದ್ರಕ್ಕೆ ಇಷ್ಟವಾಗಿಲ್ಲ. ವೇಣುಗೋಪಾಲ್ ಅವರು ತಮ್ಮ ಪತ್ರದಲ್ಲಿ ವ್ಯಕ್ತಪಡಿಸಿದ್ದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಹೇಳುವಂತೆ ಕೇಂದ್ರ ಒತ್ತಾಯಪಡಿಸಿದ್ದರಿಂದ ವೇಣುಗೋಪಾಲ್ ಇನ್ನೊಂದು ಪತ್ರ ಬರೆದು ಬಾಹ್ಯ ಸದಸ್ಯರಿರಬೇಕೆಂದು ಹೇಳಿರುವುದು  ತಮ್ಮ ವೈಯಕ್ತಿಕ ನಿಲುವು ಎಂದು ಹೇಳಿದ್ದರು ಎಂದು thewire.in ವರದಿ ತಿಳಿಸಿದೆ.

ಖ್ಯಾತ ಕಾನೂನು ತಜ್ಞ ಹಾಗೂ ಸಂವಿಧಾನ ತಜ್ಞರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವೇಣುಗೋಪಾಲ್, ಸರಕಾರದ ಜತೆ ಈ ಮಹತ್ತರ ವಿಚಾರದಲ್ಲಿ ಭಿನ್ನಾಭಿಪ್ರಾಯವೆದ್ದಿರುವ ಹಿನ್ನೆಲೆಯಲ್ಲಿ ತಮ್ಮ ಘನತೆಯನ್ನು ಉಳಿಸುವ ಸಲುವಾಗಿ ಹುದ್ದೆ ತ್ಯಜಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಮುಂದಿನ ದಿನಗಳಲ್ಲಿ ವೇಣುಗೋಪಾಲ್ ರಾಜೀನಾಮೆ ನೀಡಿದ್ದೇ ಆದಲ್ಲಿ ದೇಶದ ಅತ್ಯುನ್ನತ ನ್ಯಾಯಾಲಯದ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿರುವ ಈ ಮಹತ್ತರ ಪ್ರಕರಣವನ್ನು ಸರಕಾರ ನಿರ್ವಹಿಸಿದ ರೀತಿಯಲ್ಲಿ ಎಲ್ಲವೂ ಸರಿಯಾಗಿಲ್ಲವೆಂಬ ಅಭಿಪ್ರಾಯ ಮೂಡುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News