ಮುಖ್ಯಮಂತ್ರಿಗಳು ಚಿಕಿತ್ಸೆ ತೆಗೆದುಕೊಳ್ಳಬಾರದೆ: ಜಯಮಾಲ ಪ್ರಶ್ನೆ
ಉಡುಪಿ, ಮೇ 10: ‘ಮುಖ್ಯಮಂತ್ರಿಗಳು ಚಿಕಿತ್ಸೆ ತೆಗೆದುಕೊಳ್ಳಬಾರದೆ. ಅವರಿಗೆ ಮಧುಮೇಹ ಇರಬಹುದು ಅಥವಾ ಬೇರೆ ಬೇರೆ ಆರೋಗ್ಯ ಸಮಸ್ಯೆ ಇರಬಹುದು. ಅದೆಲ್ಲ ಅವರ ಖಾಸಗಿ ಅಲ್ಲವೇ. ಪಾಪ ಅವರ ನೋವು ಅವರಿಗೆ ಗೊತ್ತಿರುತ್ತದೆ. ಹಗಲು-ಇರುಳು ಒಳ್ಳೆಯ ಕೆಲಸ ಮಾಡಿದಾಗ ದೇಹ ದಣಿಯುವುದಿಲ್ಲವೇ. ಅವರದ್ದು ಕೂಡ ದೇಹ ಅಲ್ಲವೇ. ಸಿಎಂ ಬಗ್ಗೆ ಹೀಗೆಲ್ಲಾ ಯಾಕೆ ಮಾತನಾಡುತ್ತೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಮಾಧ್ಯಮದವರನ್ನು ಪ್ರಶ್ನಿಸಿದರು.
ಬರ ಸಮಯದಲ್ಲಿ ಮುಖ್ಯಮಂತ್ರಿಗಳು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡುತ್ತಿ ರುವ ಕುರಿತು ಸುದ್ದಿಗೋಷ್ಠಿಯಲ್ಲಿಂದು ಪತ್ರಕರ್ತರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ನನ್ನ ಹಾಗೆ ಎಲ್ಲ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಿಗೆ ತೆರಳಿ ಬರ ಸಮಸ್ಯೆಯನ್ನು ಪರಿಶೀಲನೆ ಮಾಡಿದ್ದಾರೆ. ನಾವು ಮತ ಹಾಕಿದವರಿಗೆ ಎಂದಿಗೂ ಅನ್ಯಾಯ ಮಾಡಿಲ್ಲ. ನೀವು ಕೆಲಸ ಮಾಡದ ವಿರೋಧ ಪಕ್ಷದವರ ಜೊತೆ ಇಂತಹ ಪ್ರಶ್ನೆ ಕೇಳುವುದಿಲ್ಲ ಎಂದರು.
ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆಂಬ ಯಡಿಯೂರಪ್ಪಹೇಳಿಕೆಗೆ ಉತ್ತರಿಸಿದ ಸಚಿವರು, ಎಲುಬಿಲ್ಲದ ನಾಲಗೆ ಏನು ಬೇಕಾದರೂ ಮಾತನಾ ಡುತ್ತದೆ. ಕನಸು ತುಂಬಾ ಜನ ಕಾಣುತ್ತಾರೆ. ಅದಕ್ಕೆ ನಾವು ಏನೂ ಮಾಡಲು ಆಗಲ್ಲ. ಆಸೆ ಪಡುವರರು ಪಡಲಿ. ಪ್ರಜಾಪ್ರಭುತ್ವ ಯಾರೂ ಬೇಕಾದರೂ ಕನಸು ಕಾಣಬಹುದು ಎಂದರು.
ಮೇ 23ರ ನಂತರವೂ ನಾವು ಹೀಗೆ ಇರುತ್ತೇವೆ. ಯಾವುದೇ ಸಮಸ್ಯೆ ಆಗಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗಿಂತ ಹೆಚ್ಚು ಸ್ಥಾನವನ್ನು ನಾವು ಗೆಲ್ಲುತ್ತೇವೆ ಎಂದು ಸಚಿವ ಜಯಮಾಲ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವರದ್ದು ‘ಗಡಿಬಿಡಿ ಅಳಿಯ’ ಸಿನೆಮಾದ ಸ್ಥಿತಿ !
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ರಾಜಕೀಯ ವಿಚಾರಗಳ ಕುರಿತು ಸಚಿವೆ ಜಯಮಾಲ ಅವರನ್ನು ಪ್ರಶ್ನಿಸಿದಾಗ ‘ಕುಡಿಯುವ ನೀರು ಮತ್ತು ಸುವರ್ಣ ತ್ರಿಭುಜ ಎರಡೇ ವಿಷಯದ ಕುರಿತು ಮಾತನಾಡಲು ನನಗೆ ಅವಕಾಶ ನೀಡಲಾಗಿದೆ. ಅದು ಬಿಟ್ಟು ಬೇರೆ ಯಾವುದೇ ಮಾುಗಳನ್ನು ಆಡುವುದಿಲ್ಲ’ ಎಂದರು.
ಮತ್ತೆ ಮತ್ತೆ ಸಚಿವರನ್ನು ಪ್ರಶ್ನಿಸಿದಾಗ ಅವರು, ‘ಗಡಿಬಿಡಿ ಅಳಿಯ’ ಸಿನೆಮಾ ದಲ್ಲೂ ನನಗೆ ಇದೇ ಪರಿಸ್ಥಿತಿ ಇತ್ತು. ಅಲ್ಲಿಯೂ ನನಗೆ ಮೂರೇ ಮಾತುಗಳನ್ನು ಆಡಲು ಅವಕಾಶ ನೀಡಲಾಗಿತ್ತು. ಅದೇ ರೀತಿ ಚುನಾವಣಾ ಆಯೋಗ ಕೂಡ ನನಗೆ ಎರಡೇ ವಿಷಯಗಳ ಬಗ್ಗೆ ಮಾತನಾಡಲು ಅವಕಾಶ ನೀಡಿದೆ. ಅದು ಬಿಟ್ಟು ಬೇರೆ ಮಾತುಗಳನ್ನು ಆಡುವಂತೆ ಇಲ್ಲ ಎಂದು ಹೇಳಿದರು.
ಮೂಳೂರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರನ್ನು ಭೇಟಿ ಮಾಡುವ ಕುರಿತ ಪ್ರಶ್ನೆಗೆ, ಕಾನೂನಿನಲ್ಲಿ ನನಗೆ ಅವಕಾಶ ಇಲ್ಲ. ಅವರನ್ನು ಭೇಟಿ ಮಾಡಬೇಕಾದರೆ ಮತ್ತೆ ನಾನು ಬೆಂಗಳೂರಿಗೆ ಹೋಗಿ ಬರಬೇಕು. ಸದ್ಯ ನನಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ಕರೆಯಲು ಮಾತ್ರ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.