ಮಾಲೆಗಾಂವ್ ಸ್ಫೋಟ-ಗೌರಿ ಕೊಲೆ ಪ್ರಕರಣಗಳ ಶಂಕಿತರಿಗೆ ಸಂಬಂಧವಿಲ್ಲ ಎಂದ ಸಿಟ್: ಆದರೆ ದಾಖಲೆಗಳು ಹೇಳುತ್ತಿರುವುದೇ ಬೇರೆ!

Update: 2019-05-10 14:57 GMT

ಮಾಲೆಗಾಂವ್ ಸ್ಫೋಟ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೂ ಸಂಬಂಧವಿದೆ ಎಂದು ತಾನು ಉಲ್ಲೇಖಿಸಿದ್ದೇನೆ ಎನ್ನುವುದನ್ನು ಗೌರಿ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಕರ್ನಾಟಕದ ವಿಶೇಷ ತನಿಖಾ ತಂಡ(ಸಿಟ್)ವು ನಿರಾಕರಿಸಿದೆ. ಗೌರಿ ಹತ್ಯೆ ಪ್ರಕರಣದ ಆರೋಪಿಗಳು ಹಾಗೂ ಪ್ರಜ್ಞಾ ಸಿಂಗ್,ಮಾಲೆಗಾಂವ್ ಸ್ಫೋಟ ಮತ್ತು ಅಭಿನವ ಭಾರತ್ ನಡುವೆ ಸಂಬಂಧವನ್ನು ಸಾಬೀತುಗೊಳಿಸುವ ಯಾವುದೇ ಸಾಕ್ಷ್ಯ ತನ್ನ ತನಿಖೆಯಲ್ಲಿ ಕಂಡುಬಂದಿಲ್ಲ ಅಥವಾ ಸಂಬಂಧವಿರುವ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಎಲ್ಲೂ ತಾನು ಉಲ್ಲೇಖಿಸಿಲ್ಲ ಎಂದು ಅದು ಹೇಳಿದೆ.

ಆದರೆ ಆರೋಪಪಟ್ಟಿಯ ಭಾಗವಾಗಿರುವ ಗೌರಿ ಹತ್ಯೆ ಪ್ರಕರಣದ ಮೂವರು ಆರೋಪಿಗಳು ಮತ್ತು ಸಾಕ್ಷಿಗಳಾಗಿ ಪರಿಗಣಿಸಿರುವ ಇತರ ನಾಲ್ವರು ವ್ಯಕ್ತಿಗಳ ಹೇಳಿಕೆಗಳ ವಿಶ್ಲೇಷಣೆಯು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಉಗ್ರವಾದಿ ಗುಂಪಿಗೆ ಸೇರದ ಹೊರಗಿನ ನಾಲ್ವರು ತಜ್ಞರು ಗುಂಪಿನ ಸದಸ್ಯರಿಗೆ ಶಿಬಿರಗಳಲ್ಲಿ ಬಾಂಬ್ ತಯಾರಿಕೆ ಸೇರಿದಂತೆ ವಿವಿಧ ತರಬೇತಿಗಳನ್ನು ಒದಗಿಸಿದ್ದರು ಎನ್ನುವುದನ್ನು ಬಹಿರಂಗಗೊಳಿಸಿದೆ.

 2018,ನ.23ರಂದು ಗೌರಿ ಪ್ರಕರಣದಲ್ಲಿ ಸಿಟ್ ತನ್ನ ಪೂರಕ ಆರೋಪಪಟ್ಟಿಯನ್ನು ಸಲ್ಲಸಿದಾಗ ಈ ನಾಲ್ವರು ತಜ್ಞರನ್ನು ಗುರುತಿಸಲಾಗಿರಲಿಲ್ಲ ಮತ್ತು ಅವರ 'ನಿಕ್ ನೇಮ್' ಅಥವಾ ಅಡ್ಡಹೆಸರುಗಳು ಮಾತ್ರ ಗೊತ್ತಿದ್ದವು. ಗುಜರಾತ್ ಎಟಿಎಸ್ 2018,ನ.25ರಂದು ಇವರ ಪೈಕಿ ಓರ್ವನಾದ ‘ಬಾಬಾಜಿ ಸರ್’ ಅಥವಾ ‘ಬಡೆ ಬಾಬಾಜಿ’ ಎಂಬಾತನನ್ನು ಬಂಧಿಸಿದಾಗ ಇವರೆಲ್ಲರ ಹೆಸರುಗಳು ಬಹಿರಂಗಗೊಂಡಿದ್ದವು. ‘ಬಾಬಾಜಿ ಸರ್’ ಎಂಬಾತ ಅಸಲಿಗೆ ಅಭಿನವ ಗುಂಪಿನ ಕಾರ್ಯಕರ್ತ ಸುರೇಶ ನಾಯರ್ ಆಗಿದ್ದು,2007ರ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ಕರ್ನಾಟಕ ಪೊಲೀಸ್ ಮೂಲಗಳು ಹೇಳಿವೆ. ರಾಮ್ಜಿ ಕಲ್ಸಂಗ್ರ,ಸಂದೀಪ ಡಾಂಗೆ ಮತ್ತು ಅಮಿತ ಚೌಹಾಣ್ ಅಲಿಯಾಸ್ ಹಕ್ಲಾ ಎನ್ನುವವರು ಸನಾತನ ಸಂಸ್ಥಾಕ್ಕೆ ಸಂಬಂಧಿಸಿದ ಶಿಬಿರಗಳಲ್ಲಿ ಅದರ ಕಾರ್ಯಕರ್ತರಿಗೆ ತರಬೇತಿಯನ್ನು ನೀಡಿದ್ದ ಇತರ ಮೂವರು ಬಾಂಬ್ ತಜ್ಞರಾಗಿದ್ದರು. ಕಲ್ಸಂಗ್ರ ಮತ್ತು ಡಾಂಗೆ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಜೊತೆ ಆರೋಪಿಗಳಾಗಿದ್ದಾರೆ. ಇದೇ ಠಾಕೂರ್‌ಗೆ ಈಗ ಭೋಪಾಲ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದೆ.

ಅಭಿನವ ಭಾರತ್ ಮತ್ತು ಸನಾತನ ಸಂಸ್ಥಾ ನಡುವೆ ಯಾವುದೇ ಸಂಬಂಧವನ್ನು ಸಿಟ್ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿಲ್ಲವಾದರೂ ಈ ನಾಲ್ವರು ಬಾಂಬ್ ತಜ್ಞರ ಹೆಸರುಗಳನ್ನು ಪದೇ ಪದೇ ಪ್ರಸ್ತಾಪಿಸಲಾಗಿದೆ.

ಗೌರಿ ಹತ್ಯೆಯಲ್ಲಿ ಭಾಗಿಯಾಗಿದ್ದ,ಸನಾತನ ಜೊತೆ ನಂಟು ಹೊಂದಿದ್ದ ಉಗ್ರರ ಗುಂಪಿನ ಸದಸ್ಯರು ನಡೆಸಿದ್ದ ತರಬೇತಿ ಶಿಬಿರಗಳ ವಿವರಗಳನ್ನು ಸಿಟ್ ತನ್ನ ಮುಖ್ಯ ಆರೋಪಟ್ಟಿಯಲ್ಲಿ ನೀಡಿದೆ. ಅದರಂತೆ 2010 ಮತ್ತು 2017ರ ನಡುವೆ ದೇಶದ ವಿವಿಧ ಸ್ಥಳಗಳಲ್ಲಿ 19 ತರಬೇತಿ ಶಿಬಿರಗಳು ನಡೆದಿದ್ದು, ಈಪೈಕಿ ಐದರಲ್ಲಿ ಬಾಂಬ್ ತಯಾರಿಕೆ ತರಬೇತಿಯನ್ನು ನಿಡಲಾಗಿತ್ತು.

ಗೌರಿ ಕೊಲೆ ಪ್ರಕರಣದಲ್ಲಿ ಸಿಟ್ ಬಂಧಿಸಿರುವ ಮೂವರು ಆರೋಪಿಗಳು ಮತ್ತು ನಾಲ್ವರು ಸಾಕ್ಷಿಗಳು ಸಿಟ್‌ಗೆ ನೀಡಿದ್ದ ಹೇಳಿಕೆಗಳಲ್ಲಿ ಐವರು 'ಅತಿಥಿ' ತರಬೇತುದಾರರು ಸೇರಿದಂತೆ ಈ ತರಬೇತಿ ಶಿಬಿರಗಳಲ್ಲಿ ಭಾಗಿಯಾಗಿದವರ ವಿವರಗಳು ಬಹಿರಂಗಗೊಂಡಿದ್ದವು. ಈ ಏಳೂ ಜನರು ತರಬೇತಿ ಶಿಬಿರಗಳೊಂದಿಗೆ ಗುರುತಿಸಿಕೊಂಡಿದ್ದರು. ಈ ಹೇಳಿಕೆಗಳನ್ನು 2013,ನ.23ರಂದು ಸಿಟ್ ವಿಶೇಷ ಕೋಕಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಮುಖ್ಯ ಆರೋಪಪಟ್ಟಿಯೊಂದಿಗೆ ಲಗತ್ತಿಸಲಾಗಿದೆ. ಹೇಳಿಕೆಗಳು ಮತ್ತು ವಿವಿಧ ತರಬೇತಿ ಶಿಬಿರಗಳ ವಿವರಗಳ ವಿಶ್ಲೇಷಣೆಯಿಂದ 'ಅತಿಥಿ'ತರಬೇತುದಾರರು ಬಾಂಬ್ ತಯಾರಿಕೆ ತರಬೇತಿಯನ್ನು ನೀಡಿದ್ದ ಶಿಬಿರಗಳಲ್ಲಿ ಮಾತ್ರ ಭಾಗಿಯಾಗಿದ್ದರು ಎನ್ನುವುದು ಎದ್ದು ತೋರುತ್ತದೆ.

ಉಗ್ರರ ಗುಂಪಿನ ಸದಸ್ಯರಿಗೆ ಹಲವು ಕಡೆಗಳಲ್ಲಿ ನಡೆದ ಶಿಬಿರಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ತಯಾರಿಕೆ ಮತ್ತು ಬಳಕೆಯ ಬಗ್ಗೆ ನಿರಂತರವಾಗಿ ತರಬೇತಿಯನ್ನು ನೀಡಲಾಗಿತ್ತು. ವಿವಿಧ ಕಡೆಗಳಲ್ಲಿ ತರಬೇತಿ ಶಿಬಿರಗಳನ್ನು ಗುಂಪಿನ ಸ್ಥಳೀಯ ಸದಸ್ಯರು ವಹಿಸಿಕೊಂಡಿದ್ದರು. ಅಮಿತ್ ದಿಗ್ವೆಕರ್ ಮತ್ತು ರಾಜೇಶ ಬಂಗೇರಾ ಅವರು ತರಬೇತುದಾರರಾಗಿದ್ದರು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

 ಗೌರಿ ಪ್ರಕರಣದಲ್ಲಿ ಬಂಧಿತನಾದ ಉಗ್ರರ ಗುಂಪಿನ ಸದಸ್ಯ ಶರದ ಕಲಾಸ್ಕರ್ ಎಂಬಾತ ನೀಡಿದ್ದ ಮಾಹಿತಿಗಳ ಮೇರೆಗೆ ನಾಲ್ವರು ಬಾಂಬ್ ತಯಾರಿಕೆ ತರಬೇತುದಾರರ ರೇಖಾಚಿತ್ರಗಳನ್ನು ಸೃಷ್ಟಿಸಲಾಗಿತ್ತು. ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದ ಕಲಾಸ್ಕರ್ 2013ರಲ್ಲಿ ಪುಣೆಯಲ್ಲಿ ನಡೆದಿದ್ದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ. ಈತ ಸಿಬಿಐಗೂ ಅತಿಥಿ ತರಬೇತುದಾರರ ಬಗ್ಗೆ ವಿವರಗಳನ್ನು ಒದಗಿಸಿದ್ದ.

ಲಂಬು ಸರ್,ಬಾಬಾಜಿ ಸರ್,ಸರ್ಕ್ಯೂಟ್ ಎಕ್ಸ್‌ಪರ್ಟ್ ಸರ್ ಮತ್ತು ಬಂಗಾಳಿ ವ್ಯಕ್ತಿ ಎಂದು ಬಣ್ಣಿಸಲಾಗಿದ್ದ ನಾಲ್ವರು ಅಪರಿಚಿತ ತರಬೇತುದಾರರ ರೇಖಾಚಿತ್ರಗಳನ್ನು ಸೃಷ್ಟಿಸಿರುವುದಾಗಿ ಸಿಟ್ 2018,ಅ.4ರ ಪಂಚನಾಮಾ ದಾಖಲೆಯಲ್ಲಿ ವರದಿ ಮಾಡಿತ್ತು.

   ಮೂವರು 'ಸರ್'ಗಳು ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ತರಬೇತಿ ಶಿಬಿರಗಳನ್ನು ನಡೆಸಿದ್ದರೆ ಬಂಗಾಳಿ ವ್ಯಕ್ತಿ 2015,ಆಗಸ್ಟ್‌ನಲ್ಲಿ ಕರ್ನಾಟಕದ ಧರ್ಮಸ್ಥಳದ ಬಳಿ ನಡೆಸಲಾಗಿದ್ದ ಶಿಬಿರದಲ್ಲಿ ಗುಂಪಿನ ಸದಸ್ಯರಿಗೆ ತರಬೇತಿಯನ್ನು ಒದಗಿಸಿದ್ದ. ಈ ಬಂಗಾಳಿ ವ್ಯಕ್ತಿ ಶಿಬಿರಕ್ಕೆ ಪ್ರತಾಪ ಹಝ್ರೆ ಎಂಬಾತನನ್ನು ಕರೆದುಕೊಂಡು ಬಂದಿದ್ದ ಎಂದು ಕಲಾಸ್ಕರ್ ಹೇಳಿದ್ದನ್ನು ಪಂಚನಾಮಾ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಈ ಹಝ್ರೆ ಎಂಬಾತ ಪ.ಬಂಗಾಳದಲ್ಲಿ ಸಕ್ರಿಯವಾಗಿರುವ ಭವಾನಿ ಸೇನಾದ ನಾಯಕನೆಂದು ನಂಬಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಗೌರಿ ಪ್ರಕರಣದಲ್ಲಿ ಬಂಧಿತ ಶ್ರೀಕಾಂತ ಪಂಗರಕರ್ ಮತ್ತು ವಾಸುದೇವ ಸೂರ್ಯವಂಶಿ ಅವರೂ ತನಿಖೆಯ ಸಂದರ್ಭದಲ್ಲಿ ಬಾಬಾಜಿ ಅಥವಾ ಬಡೆ ಬಾಬಾಜಿಯ ವರ್ಣನೆಗಳನ್ನು ಒದಗಿಸಿದ್ದರು. ಪಂಗರಕರ್ ಮಹಾರಾಷ್ಟ್ರದ ಮಾಜಿ ಶಿವಸೇನಾ ಕಾರ್ಪೊರೇಟರ್ ಆಗಿದ್ದರೆ,ಮೆಕ್ಯಾನಿಕ್ ಆಗಿದ್ದ ಸೂರ್ಯವಂಶಿ 2015-17ರ ನಡುವೆ ಸನಾತನದೊಂದಿಗೆ ತಳುಕು ಹಾಕಿಕೊಂಡಿರುವ,ವಿಚಾರವಾದಿಗಳು ಮತ್ತು ಮುಕ್ತಚಿಂತಕರ ಸರಣಿ ಹತ್ಯೆಗಳಿಗೆ ಕದ್ದ ಬೈಕ್‌ಗಳನ್ನು ಒದಗಿಸಿದ್ದ. ಗೌರಿ ಪ್ರಕರಣದ ನಾಲ್ವರು ಸಾಕ್ಷಿಗಳೂ ಬಡೆ ಬಾಬಾಜಿಯ ಚಹರೆಗಳನ್ನು ಬಣ್ಣಿಸಿದ್ದರು.

 ಐಇಡಿ ತಜ್ಞರು 'ಅಸೀಮಾನಂದ ಗುಂಪಿನ' ಸದಸ್ಯರು ಎಂದು ತನಗೆ ತಿಳಿಸಲಾಗಿತ್ತು ಎಂದು ಗೌರಿ ಪ್ರಕರಣದ ಶಂಕಿತ ಆರೋಪಿಯೋರ್ವ ವಿಚಾರಣೆ ವೇಳೆ ತಿಳಿಸಿದ್ದ. ಆತ ಬಹುಶಃ ಮಾಜಿ ಆರೆಸ್ಸೆಸ್ ಕಾರ್ಯಕರ್ತ ನಬಕುಮಾರ ಸರ್ಕಾರ್ ಅಲಿಯಾಸ್ ಅಸೀಮಾನಂದನನ್ನು ಪ್ರಸಾಪಿಸಿದ್ದ. 2006-2008ರ ಅವಧಿಯಲ್ಲಿ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಈತ ಸಂಜೋತಾ ಎಕ್ಸ್‌ಪ್ರೆಸ್,ಮಕ್ಕಾ ಮಸೀದಿ ಮತ್ತು ಅಜ್ಮೀರ್ ಸ್ಫೋಟ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾನೆ.

 ಅಮಿತ ದಿಗ್ವೆಕರ್,ವೀರೇಂದ್ರ ತಾವಡೆ,ಶರದ ಕಲಾಸ್ಕರ್,ಶ್ರೀಕಾತ ಪಂಗರಕರ್,ವಾಸುದೇವ ಸೂರ್ಯವಂಶಿ,ಗಣೇಶ ಮಿಸ್ಕಿನ್,ಅಮಿತ ಬದ್ದಿ ಮತ್ತು ಭರತ ಕುರ್ನೆ ಅವರು ಅಭಿನವ ಭಾರತ ನಡೆಸಿದ ಐಇಡಿ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದ ಗೌರಿ ಮತ್ತು ಇತರ ಕೊಲೆಗಳ ಶಂಕಿತರಲ್ಲಿ ಸೇರಿದ್ದಾರೆ. ಇಎನ್‌ಟಿ ವೈದ್ಯ ಮತ್ತು ಸನಾತನ ಕಾರ್ಯಕರ್ತ ತಾವಡೆ 2011-16ರ ನಡುವೆ ಗುಂಪಿನ ನೇತೃತ್ವ ವಹಿಸಿದ್ದಾಗ 2008ರಿಂದಲೂ ತಲೆಮರೆಸಿಕೊಂಡಿದ್ದ ಅಭಿನವ ಭಾರತ್‌ನ ಸದಸ್ಯರನ್ನು ಸನಾತನದೊಂದಿಗೆ ನಂಟು ಹೊಂದಿದ್ದ ವ್ಯಕ್ತಿಗಳಿಗೆ ಬಾಂಬ್ ತಯಾರಿಕೆ ಬಗ್ಗೆ ತರಬೇತಿ ನೀಡಲು ಕರೆತರಲಾಗಿತ್ತು ಎನ್ನಲಾಗಿದೆ.

ಕೆಲವು ತರಬೇತಿ ಶಿಬಿರಗಳಲ್ಲಿ ದಿಗ್ವೆಕರ್ ಬಾಂಬ್ ತಯಾರಿಕೆ ತರಬೇತಿಯನ್ನು ನೀಡಿದ್ದ. ಗೋವಾದ ಸನಾತನ ಆಶ್ರಮದ ನಿವಾಸಿಯಾಗಿದ್ದ ಈತನನ್ನು ಹಣಕಾಸು ಮತ್ತು ಇತರ ನೆರವನ್ನು ಒದಗಿಸಿದಕ್ಕಾಗಿ ಬಂಧಿಸಲಾಗಿದೆ ಎಂದು ಗೌರಿ ಪ್ರಕರಣದಲ್ಲಿನ ದಾಖಲೆಗಳು ಹೇಳಿವೆ. ಸನಾತನ ಆಶ್ರಮದಲ್ಲಿ ದಿಗ್ವೆಕರ್‌ನ ರೂಮ್‌ಮೇಟ್ ಆಗಿದ್ದ ಮಲಗೊಂಡ ಪಾಟೀಲ 2009ರಲ್ಲಿ ಗೋವಾದ ಮಡಗಾಂವ್‌ನಲ್ಲಿ ಬಾಂಬ್ ಸಾಗಿಸುತ್ತಿದ್ದಾಗ ಅದು ಸ್ಫೋಟಗೊಂಡು ಸಾವನ್ನಪ್ಪಿದ್ದ.

 ಗೌರಿ ಪ್ರಕರಣದಲ್ಲಿಯ ದಾಖಲೆಗಳು ಹೇಳುವಂತೆ ಕರ್ನಾಟಕದಲ್ಲಿ ಸನಾತನದ ನಂಟು ಹೊಂದಿರುವ ಗುಂಪೊಂದು 2017ರಲ್ಲಿ ಬಾಂಬ್ ತಜ್ಞನೋರ್ವನನ್ನು ಸೇರಿಸಿಕೊಳ್ಳಲು ಪ್ರಯತ್ನಿಸಿತ್ತು. ಈ ವ್ಯಕ್ತಿ 2008ರಲ್ಲ್ಲಿ ಹುಬ್ಬಳ್ಳಿಯ ನ್ಯಾಯಾಲಯದಲ್ಲಿ ಇಡಲಾಗಿದ್ದ ಪೈಪ್ ಬಾಂಬ್‌ನ್ನು ತಯಾರಿಸಿದ್ದಕ್ಕಾಗಿ ಶಿಕ್ಷೆಯನ್ನು ಅನುಭವಿಸಿ ಆಗಷ್ಟೇ ಜೈಲಿನಿಂದ ಹೊರಬಂದಿದ್ದ. ಶ್ರೀರಾಮ ಸೇನೆಯ ಮಾಜಿ ಸದಸ್ಯನಾದ ಈ ವ್ಯಕ್ತಿ ಬಾಂಬ್‌ಗಳನ್ನು ತಯಾರಿಸಿದ್ದಕಾಗಿ ತಾನೀಗಾಗಲೇ ಜೈಲು ಶಿಕ್ಷೆಯನ್ನು ಅನುಭವಿಸಿದ್ದೇನೆ ಮತ್ತು ಅಪರಾಧ ಲೋಕದಿಂದ ದೂರವುಳಿಯಲು ಬಯಸಿದ್ದೇನೆ ಎಂದು ಹೇಳುವ ಮೂಲಕ ಕರ್ನಾಟಕದ ಈ ಗುಂಪಿನ 'ಆಫರ್ 'ನಿರಾಕರಿಸಿದ್ದ.

Writer - ಜಾನ್ಸನ್ ಟಿ.ಎ, indianexpress.com

contributor

Editor - ಜಾನ್ಸನ್ ಟಿ.ಎ, indianexpress.com

contributor

Similar News