ಮಕ್ಕಳಿಗೆ ವಿಶೇಷ ಸ್ಥಾನ ನೀಡಿದ ಡಾ. ಶಿವರಾಮ ಕಾರಂತರು-ಹೆಚ್.ಕೆ. ಕೃಷ್ಣಮೂರ್ತಿ

Update: 2019-05-10 15:12 GMT

ಪುತ್ತೂರು: ಡಾ. ಶಿವರಾಮ ಕಾರಂತರು ತಾನು ಹೇಳುವುದನ್ನು ಮಾಡುತ್ತಿದ್ದರು ಹಾಗೂ ಮಾಡಿದ್ದನ್ನು ಹೇಳುತ್ತಿದ್ದರು. ಅಲ್ಲದೇ ಅವರು ಮಕ್ಕಳಿಗೋಸ್ಕರ ತಮ್ಮ ಜೀವನದಲ್ಲಿ ವಿಶೇಷ ಸ್ಥಾನವನ್ನು ನೀಡಿ, ಮಕ್ಕಳ ಏಳಿಗೆ ಹಾಗೂ ಕ್ರಿಯಾಶೀಲತೆಯನ್ನು ಬಯಸಿದವರಾಗಿದ್ದರು ಪುತ್ತೂರು ಸಹಾಯಕ ಕಮೀಶನರ್ ಎಚ್.ಕೆ. ಕೃಷ್ಣಮೂರ್ತಿ ಹೇಳಿದರು.

ಅವರು ಶುಕ್ರವಾರ ಪುತ್ತೂರು ಪರ್ಲಡ್ಕದಲ್ಲಿರುವ ಬಾಲವನದಲ್ಲಿ ಪುತ್ತೂರು ಡಾ. ಶಿವರಾಮ ಕಾರಂತ ಬಾಲವನ ಅಭಿವೃದ್ಧಿ ಸಮಿತಿ ಹಾಗೂ ಪುತ್ತೂರು ಉಪವಿಭಾಗದ ಸಹಾಯಕ ಅಯುಕ್ತರ ಆಶ್ರಯದಲ್ಲಿ ಮೇ.10ರಿಂದ 25ರ ತನಕ ನಡೆಯಲಿರುವ `ಬಾಲವನ ರಂಗಚಿತ್ತಾರ-2019' ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಡಾ. ಕಾರಂತರು ಓಡಾಡಿದ ಅವರ ಕರ್ಮಭೂಮಿಯಾದ ಬಾಲವನದ ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಮಕ್ಕಳೆಲ್ಲರೂ ಅದೃಷ್ಟವಂತರು. ಈ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಒಂದೆರಡು ಒಳ್ಳೆಯ ಬದಲಾವಣೆಯಾದರೆ. ಅದು ಅವರ ಪೋಷಕರಿಗೆ ಸಿಕ್ಕ ಸಾಧನೆ ಎಂದರು.

ನಾವು ಮಕ್ಕಳ ಜೊತೆಗೆ ಮಕ್ಕಳಾಗಬೇಕು ಹಾಗೂ ವೃದ್ಧರ ಜೊತೆ ವೃದ್ಧರಾಗಬೇಕು. ಆಗ ನಾವು ಜೀವನದಲ್ಲಿ ಗೆಲ್ಲಲು ಹಾಗೂ ಸಾಧಿಸಲು ಸಾಧ್ಯವಾಗುತ್ತದೆ. ಆದರೆ ನಾವು ಕೆಟ್ಟವರ ಜೊತೆ ಸೇರಿ ಕೆಟ್ಟವರಾಗಬಾರದು. ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಮಕ್ಕಳು ಅದೃಷ್ಟವಂತರು. ಏಕೆಂದರೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವ ವ್ಯಕ್ತಿಗಳು, ತನ್ನ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ ಮತ್ತೊಬ್ಬರಿಗೆ ಒಳ್ಳೆಯದನ್ನು ಬಯಸುತ್ತಾರೆ. ಅಲ್ಲದೇ ಮಕ್ಕಳೆಲ್ಲರೂ ಶಿಬಿರದಲ್ಲಿ ಭಾಗವಹಿಸುವುದರಿಂದ ಕ್ರಿಯಾಶೀಲತೆಯು ಹೆಚ್ಚುತ್ತದೆ. ಒಂದು ಸಣ್ಣ ವಿಚಾರವೂ ಜೀವನವನ್ನು ಬದಲಾಯಿಸಬಹುದು ಎಂದರು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ. ಎನ್. ಮಾತನಾಡಿ, ಮಕ್ಕಳಿಗೆ ಶಿಬಿರದಲ್ಲಿ ಭಾಗವಹಿಸುವ ಉತ್ಸಾಹವಿದ್ದರೂ, ಹೆಚ್ಚಿನ ಪೋಷಕ ರಲ್ಲಿ ಆ ಉತ್ಸಾಹ ಹಾಗೂ ಪ್ರೋತ್ಸಾಹ ಕಾಣ ಸಿಗುತ್ತಿಲ್ಲ. ಪೋಷಕರೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ. ಹಾಗಾಗಿ ಅವರು ತಮ್ಮ ಮಾನಸಿಕ ವ್ಯವಸ್ಥೆ ಹಾಗೂ ವ್ಯಕ್ತಿತ್ವವನ್ನು ಬದಲಾವಣೆಯಾಗಬೇಕು. ಬೇಸಿಗೆ ಶಿಬಿರಗಳಲ್ಲಿ ಸಂಪನ್ಮೂಲ ವಿಷಯಗಳನ್ನು, ಸಂಪನ್ಮೂಲ ವ್ಯಕ್ತಿಗಳಿಂದ ಬಳಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಎಂದರು.

ಸಂಪನ್ಮೂಲ ವ್ಯಕ್ತಿಯಾದ ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ ಮಕ್ಕಳ ರಂಗಭೂಮಿಯ ಬಗ್ಗೆ ಇತ್ತೀಚೆಗೆ ಬಹಳಷ್ಟು ಚರ್ಚೆ, ವಿಚಾರ ಮಂಡನೆಗಳು ನಡೆಯುತ್ತಿರುವುದು ಮಕ್ಕಳ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ. ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಿಗೆ ಅಂಜಿಕೆ, ಅಧೈರ್ಯ. ಕೀಳರಿಮೆ ದೂರವಾಗುತ್ತದೆ ಹಾಗೂ ಆತ್ಮವಿಶ್ವಾಸ ಹೆಚ್ಚಲು ಸಹಕಾರಿಯಾಗುತ್ತದೆ ಎಂದರು.

ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಶಿವಗಿರಿ ಕಲ್ಲಡ್ಕ ಉಪಸ್ಥಿತರಿದ್ದರು. 
ಶಿಬಿರ ನಿರ್ದೇಶಕ ಕೃಷ್ಣಪ್ಪ ಬಂಬಿಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ನಯನಾ ರೈ ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ ರೈ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News