ಬಜೆ ಅಣೆಕಟ್ಟಿನಲ್ಲಿ 2ನೇ ದಿನವೂ ಮುಂದುವರಿದ ಶ್ರಮದಾನ
ಉಡುಪಿ, ಮೇ 10: ಉಡುಪಿ ನಗರಕ್ಕೆ ಎದುರಾಗಿರುವ ನೀರಿನ ಸಮಸ್ಯೆ ನೀಗಿಸಲು ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ನಗರಸಭಾ ವ್ಯಾಪ್ತಿಯ ನಾಗರಿಕರಿಂದ ಸ್ವರ್ಣ ನದಿಯ ಬಜೆ ಅಣೆಕಟ್ಟು ಪ್ರದೇಶದ ಆಸುಪಾಸಿನಲ್ಲಿ ನಡೆದಿರುವ ಶ್ರಮದಾನ ಶುಕ್ರವಾರ ಎರಡನೇ ದಿನವೂ ಮುಂದುವರಿಯಿತು.
ಅಣೆಕಟ್ಟಿನ ಸುತ್ತಮುತ್ತ ನೀರು ಹರಿಯುವ ಸ್ಥಳದಲ್ಲಿ ಇದ್ದ ಅಡೆತಡೆಗಳನ್ನು ನಿವಾರಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದು ಇಂದು ಹೂಳೆತ್ತುವ ಕಾರ್ಯವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ವಿವಿಧ ವಾರ್ಡ್‌ಗಳ ನಗರಸಭಾ ಸದಸ್ಯರು, ಪ್ರಮುಖರು, ನಾಗರಿಕರು ಹಾಗೂ ಕಾರ್ಯಕರ್ತರು ಜೊತೆಗಿದ್ದರು.
ಈಗಾಗಲೇ ಎರಡು ದಿನಗಳ ಶ್ರಮದಾನ ನಡೆಯಿತು. ಕೆ.ರಘುಪತಿ ಭಟ್ ಅವರೇ ನಿಂತು ಕೆಲಸ ಮಾಡಿಸುತಿದ್ದಾರೆ. ಇಂದು ಹಿಟಾಚಿ ಮೂಲಕ ಹೂಳೆತ್ತುವ ಕಾರ್ಯ ಮಾಡಲಾಯಿತು. ಇದರಿಂದ ಈಗಾಗಲೇ ಮೇಲಿನಿಂದ ಬಜೆ ಅಣೆಕಟ್ಟು ಜಾಕ್‌ವೆಲ್‌ನತ್ತ ನೀರಿನ ಹರಿವು ಹೆಚ್ಚಾಗಿದೆ ಎಂದವರು ತಿಳಿಸಿದರು.
ಈ ಶ್ರಮದಾನ ಮೂರನೇ ದಿನವಾದ ನಾಳೆಯೂ ಮುಂದುವರಿಯಲಿದೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ. ನಾಳೆಯೂ ಹಿಟಾಚಿ ಮೂಲಕ ಹೂಳುತ್ತೆವು ಕಾರ್ಯ ಮಾಡಲಾಗುವುದು. ಉಡುಪಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಳ್ಳಬೇಕು ಎಂದವರು ಮನವಿ ಮಾಡಿದ್ದಾರೆ.