ಪ.ಬಂಗಾಳ: ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿದ್ದ 1ಲಕ್ಷ ರೂ. ಜಪ್ತಿ

Update: 2019-05-10 17:12 GMT

ಕೋಲ್ಕತಾ, ಮೇ 10: ಪಶ್ಚಿಮ ಬಂಗಾಳದ ಮಾಜಿ ಪೊಲೀಸ್ ಅಧಿಕಾರಿ, ಈಗ ಬಿಜೆಪಿ ಅಭ್ಯರ್ಥಿಯಾಗಿರುವ ಭಾರತಿ ಘೋಷ್ ಅವರ ಕಾರಿನಲ್ಲಿ 1 ಲಕ್ಷ ರೂ.ಗಿಂತಲೂ ಹೆಚ್ಚಿನ ನಗದು ಹಣ ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ, ಆರೋಪವನ್ನು ನಿರಾಕರಿಸಿರುವ ಭಾರತಿ ಘೋಷ್, ರಾಜ್ಯದ ಟಿಎಂಸಿ ಸರಕಾರ ತನ್ನ ವಿರುದ್ಧ ನಡೆಸಿರುವ ಷಡ್ಯಂತ್ರ ಇದಾಗಿದೆ ಎಂದು ಆರೋಪಿಸಿದ್ದಾರೆ. ಶುಕ್ರವಾರ ಬೆಳಗ್ಗಿನ ಜಾವ ಸುಮಾರು 2 ಗಂಟೆ ವೇಳೆಗೆ ಪಿಂಗ್ಲ ಎಂಬಲ್ಲಿ ರಸ್ತೆ ಬದಿಯ ಪೊಲೀಸ್ ತಪಾಸಣಾ ಕೇಂದ್ರದಲ್ಲಿ ಭಾರತಿ ಘೋಷ್ ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸಲಾಯಿತು. ಈ ಸಂದರ್ಭ ತಮ್ಮಲ್ಲಿರುವ ಹಣವನ್ನು ಚೀಲವೊಂದಕ್ಕೆ ಹಾಕುವಂತೆ ಕಾರಿನಲ್ಲಿದ್ದವರಿಗೆ ಸೂಚಿಸಲಾಗಿದೆ. ಆಗ ಭಾರತಿ 50 ಸಾವಿರ ರೂ, ಅವರ ಸಹಾಯಕ 50 ಸಾವಿರ ರೂ. ಹಾಗೂ ಕಾರಿನ ಚಾಲಕ 13,895 ರೂ. ಹಾಕಿದ್ದಾನೆ ಎನ್ನಲಾಗಿದೆ.

ಈ ಹಣವನ್ನು ಜಪ್ತಿ ಮಾಡಿಕೊಂಡ ಪೊಲೀಸರು 1,13,895 ರೂ. ಹಣ ಜಪ್ತಿ ಮಾಡಿರುವ ಪತ್ರಕ್ಕೆ ಸಹಿ ಹಾಕುವಂತೆ ಭಾರತಿ ಘೋಷ್‌ಗೆ ತಿಳಿಸಿದಾಗ ಅವರು ನಿರಾಕರಿಸಿದ್ದಾರೆ. ತನ್ನ ಬಳಿ ಇದ್ದ ಹಣಕ್ಕೆ ಮಾತ್ರ ತಾನು ಜವಾಬ್ದಾರಳಾಗಿದ್ದು ಆ ಮೊತ್ತಕ್ಕೆ ಸಹಿ ಹಾಕುತ್ತೇನೆ. ಉಳಿದ ಮೊತ್ತಕ್ಕೆ ಸಹಾಯಕ ಮತ್ತು ಚಾಲಕ ಸಹಿ ಹಾಕಬೇಕು ಎಂದು ವಾದಿಸಿದ್ದಾರೆ. ಬಳಿಕ ಅವರನ್ನು ವಿಚಾರಣೆಗೆಂದು ವಶಕ್ಕೆ ಪಡೆದು ಸುಮಾರು 3 ಗಂಟೆಯ ಬಳಿಕ ತೆರಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಬಂಗಾಳ ಚುನಾವಣಾ ಕಚೇರಿ ಸೂಚಿಸಿದೆ. ಘಾಟಲ್ ಸಂಸದೀಯ ಕ್ಷೇತ್ರದಲ್ಲಿ ಭಾರತಿ ಘೋಷ್ ಬಿಜೆಪಿ ಅಭ್ಯರ್ಥಿಯಾಗಿದ್ದರೆ ಟಿಎಂಸಿಯಿಂದ ಬಂಗಾಳ ಸಿನೆಮಾ ನಟ ದೀಪಕ್ ಅಧಿಕಾರಿ ಕಣಕ್ಕಿಳಿದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News