ಆಸ್ಟ್ರೇಲಿಯ ‘ಎ’ ವಿರುದ್ಧ ಭಾರತದ ಹಾಕಿ ತಂಡಕ್ಕೆ ಜಯ

Update: 2019-05-10 18:49 GMT

ಪರ್ತ್, ಮೇ 10: ಯುವ ಸ್ಟ್ರೈಕರ್ ಸುಮಿತ್ ಕುಮಾರ್ ಜೂನಿಯರ್ ಗಳಿಸಿದ ಅವಳಿ ಗೋಲು ಹಾಗೂ ತಂಡಕ್ಕೆ ವಾಪಸಾಗಿರುವ ರೂಪಿಂದರ್‌ಪಾಲ್ ಸಿಂಗ್ ಬಾರಿಸಿದ ಏಕೈಕ ಗೋಲು ನೆರವಿನಿಂದ ಶುಕ್ರವಾರ ಭಾರತದ ಪುರುಷರ ಹಾಕಿ ತಂಡ ಆಸ್ಟ್ರೇಲಿಯ ‘ಎ’ ವಿರುದ್ಧ 3-0 ಅಂತರದಿಂದ ಜಯ ದಾಖಲಿಸಿದೆ.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಸುಮಾರು 8 ತಿಂಗಳ ಬಳಿಕ ಸಕ್ರಿಯ ಹಾಕಿಗೆ ವಾಪಸಾದ ಡ್ರಾಗ್-ಫ್ಲಿಕರ್ ರೂಪಿಂದರ್ ಆರನೇ ನಿಮಿಷದಲ್ಲಿ ಗೋಲು ಗಳಿಸಿ ಪ್ರವಾಸಿ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಯುವ ಸ್ಟ್ರೈಕರ್ ಸುಮಿತ್ 12ನೇ ಹಾಗೂ 13ನೇ ನಿಮಿಷದಲ್ಲಿ ಗೋಲು ಗಳಿಸುವುದರೊಂದಿಗೆ ಭಾರತ ಸತತ ಎರಡನೇ ಪಂದ್ಯ ಜಯಿಸಲು ನೆರವಾದರು.

ಭಾರತೀಯ ಆಟಗಾರರು ಮೊದಲ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ನಿರಂತರವಾಗಿ ಸ್ಟ್ರೈಕಿಂಗ್ ಸರ್ಕಲ್ ಒಳಗೆ ಪ್ರವೇಶಿಸಲು ಯತ್ನಿಸಿದರು. ಈ ತಂತ್ರ ಯಶಸ್ವಿಯಾಗಿದ್ದು ಭಾರತ ಮೊದಲ ಕ್ವಾರ್ಟರ್‌ನಲ್ಲಿ ಮೂರು ಗೋಲುಗಳನ್ನು ಗಳಿಸಿ ಆತಿಥೇಯ ತಂಡವನ್ನು ಹಿಮ್ಮೆಟ್ಟಿಸಿತು.

 ಆರನೇ ನಿಮಿಷದಲ್ಲಿ ಎದುರಾಳಿ ತಂಡದ ಗೋಲ್‌ಕೀಪರ್‌ನ್ನು ವಂಚಿಸಿದ ರೂಪಿಂದರ್ ಸಮಯೋಚಿತ ಫ್ಲಿಕ್ ಮೂಲಕ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ನಾಯಕ ಮನ್‌ಪ್ರೀತ್ ಸಿಂಗ್ ನೀಡಿದ ಉತ್ತಮ ಅಸಿಸ್ಟ್ ಬೆಂಬಲದಿಂದ ಸುಮಿತ್ 12ನೇ ನಿಮಿಷದಲ್ಲಿ ಅಮೋಘ ಫೀಲ್ಡ್ ಗೋಲು ಬಾರಿಸಿದರು.

13ನೇ ನಿಮಿಷದಲ್ಲಿ ತನ್ನ ಮೂರನೇ ಗೋಲು ಗಳಿಸಿದ ಭಾರತ ಆತಿಥೇಯ ತಂಡಕ್ಕೆ ಆಘಾತ ನೀಡಿತು. ಸ್ಟ್ರೈಕರ್ ಆಕಾಶ್‌ದೀಪ್ ಸಿಂಗ್ ನೆರವಿನಿಂದ 21ರ ಹರೆಯದ ಸುಮಿತ್ 13ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದರು.

ಮೊದಲ ಕ್ವಾರ್ಟರ್‌ನಲ್ಲಿ 3-0 ಮುನ್ನಡೆ ಪಡೆದ ಭಾರತ ಉತ್ತಮ ರಕ್ಷಣಾತ್ಮಕ ಆಟದ ಮೂಲಕ ಆಸ್ಟ್ರೇಲಿಯದ ದಾಳಿಯನ್ನು ಒಗ್ಗಟ್ಟಿನಿಂದ ಎದುರಿಸಿತು. ಆಸ್ಟ್ರೇಲಿಯ ಎರಡನೇ ಕ್ವಾರ್ಟರ್‌ನಲ್ಲಿ ಗೋಲು ಗಳಿಸುವ ಏಕೈಕ ಅವಕಾಶ ಪಡೆದಿತ್ತು. ಆದರೆ, ಭಾರತದ ಗೋಲ್‌ಕೀಪರ್ ಕ್ರಿಶನ್ ಪಾಠಕ್ ಗೋಲು ನಿರಾಕರಿಸಿದರು.

 ಭಾರತ ಸೋಮವಾರ ಮತ್ತೊಂದು ಪಂದ್ಯವನ್ನಾಡಲಿದ್ದು ಆಸೀಸ್ ಪ್ರವಾಸದಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸುವ ವಿಶ್ವಾಸ ದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News