ಬಿ.ಸಿ.ರೋಡಿನಲ್ಲಿ ರಸ್ತೆ ಅಪಘಾತ: ಬೈಕ್ ಸವಾರನಿಗೆ ಗಾಯ
Update: 2019-05-11 15:06 IST
ಬಂಟ್ವಾಳ : ಪೊಲೀಸರ ಟ್ರಾಫಿಕ್ ಕಾರ್ಯಾಚರಣೆಯ ವೇಳೆ ಬೈಕ್ ಸವಾರನೊಬ್ಬ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡಿನಲ್ಲಿ ನಡೆದಿದೆ.
ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉದಯ ಲಾಂಡ್ರಿಯ ಮುಂಭಾಗ ಚತುಷ್ಪಥ ಮೇಲ್ಸೆತುವೆ ಕೊನೆಗೊಳ್ಳುವ ಸ್ಥಳದಲ್ಲಿ ಬಂಟ್ವಾಳ ಸಂಚಾರಿ ಎಸೈ ಮಂಜುನಾಥ್ ಅವರ ನೇತೃತ್ವದಲ್ಲಿ ಪೊಲೀಸರು ಟ್ರಾಫಿಕ್ ಕಾರ್ಯಾಚರಣೆ ಕೈಗೊಂಡಿದ್ದರು. ಈ ಸಂದರ್ಭ ಹೆಲ್ಮೆಟ್ ಇಲ್ಲದೆ ವೇಗವಾಗಿ ಬರುತ್ತಿದ್ದ ಬೈಕ್ ಸವಾರನ್ನು ನಿಲ್ಲಿಸಲು ಪೊಲೀಸರು ಪ್ರಯತ್ನಿಸಿದಾಗ ಮುಂಭಾಗದಲ್ಲಿ ತೆರಳುತ್ತಿದ್ದ ರಿಕ್ಷಾಕ್ಕೆ ಢಿಕ್ಕಿಯಾಗಿದೆ. ರಿಕ್ಷಾ ಮೇಲ್ಸೆತುವೆಯ ತಡೆಗೋಡೆಗೆ ಬಡಿದು ಉರುಳಿ ಬಿದ್ದಿದ್ದು ಬೈಕ್ ಹಾಗೂ ರಿಕ್ಷಾ ನುಜ್ಜುಗುಜ್ಜಾಗಿವೆ.
ಪೊಲೀಸರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.