ಉಡುಪಿ: ಸರಳಿನಲ್ಲಿ ಸಿಲುಕಿ ಗಾಯಗೊಂಡ ಹಾವಿನ ರಕ್ಷಣೆ
ಉಡುಪಿ, ಮೇ 11: ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾ ಪ್ರದೇಶದಲ್ಲಿ ಇಂದು ಬೆಳಗ್ಗೆ ಮನೆಯೊಂದರ ಗೇಟಿನ ಚೂಪಾದ ಸರಳಿನ ಮೇಲೆ ಬಿದ್ದು ಘಾಸಿಗೊಂಡ ಕೇರೆ ಹಾವೊಂದನ್ನು ಉರಗ ತಜ್ಞ ಗುರುರಾಜ್ ಸನಿಲ್ ರಕ್ಷಿಸಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.
ಕೇರೆ ಹಾವೊಂದು ರಾಘವೇಂದ್ರ ನಾಕ್ ಎಂಬವರ ಮನೆಯ ತಾರಸಿಯ ಮೇಲೆ ಇಲಿಯ ಬೇಟೆಗಾಗಿ ಹತ್ತಿ ಹೋಗುವ ಸಂದರ್ಭ ಆಯತಪ್ಪಿ ಗೇಟಿನ ಚೂಪಾದ ಸರಳಿನ ಮೇಲೆಯೇ ಬಿತ್ತೆನ್ನಲಾಗಿದೆ. ಇದರ ಪರಿಣಾಮ ಹೊಟ್ಟೆಯೊಳಗೆ ರಾಡ್ ಹೊಕ್ಕಿ ಹಾವು ಗಾಯಗೊಂಡಿತ್ತು.
ಇದನ್ನು ಗಮನಿಸಿದ ಮನೆಮಂದಿ ತಕ್ಷಣ ಗುರುರಾಜ್ ಸನಿಲ್ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಸನಿಲ್ ಹಾವಿನ ರಕ್ಷಣೆಗೆ ಮುಂದಾದರು. ಈ ವೇಳೆ ಹಾವು ಅವರ ಕೈಗೆ ಹಲವು ಬಾರಿ ಕಚ್ಚಿತ್ತೆನ್ನಲಾಗಿದೆ. ಕೇರೆ ಹಾವು ವಿಷರಹಿತವಾಗಿರುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸನಿಲ್ ತಿಳಿಸಿದ್ದಾರೆ.
ಗಾಯಗೊಂಡ ಹಾವನ್ನು ಮನೆಗೆ ತಂದು ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ. ಇದೇ ರೀತಿ ಈ ಹಿಂದೆ ನಾಗರಹಾವೊಂದು ಮರದಿಂದ ಬಿದ್ದು ಗಾಯಗೊಂಡಿತ್ತು. ಅದಕ್ಕೂ ಇದೇ ರೀತಿ ಚಿಕಿತ್ಸೆ ನೀಡಿದ್ದು, 20 ದಿನಗಳಲ್ಲಿ ಅದು ಗುಣಮುಖವಾಗಿತ್ತು ಎಂದು ಅವರು ತಿಳಿಸಿದ್ದಾರೆ.