×
Ad

ನೀರು ಪೂರೈಕೆಯಲ್ಲೂ ಸಮಸ್ಯೆ: ಟ್ಯಾಂಕರ್‌ನಲ್ಲಿ ನೀರು ಸರಬರಾಜು

Update: 2019-05-11 21:31 IST

ಉಡುಪಿ, ಮೇ 11: ಉಡುಪಿ ನಗರಸಭೆ ನೀರು ಪೂರೈಕೆ ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ತೀರಾ ಇಳಿಮುಖವಾಗಿರುವುದರಿಂದ ಇಂದು ನಿಗದಿಪಡಿಸಿದ ಎಲ್ಲ ಪ್ರದೇಶಗಳಿಗೂ ನೀರು ಸರಬರಾಜು ಮಾಡಲು ಸಾಧ್ಯ ವಾಗದೆ ಟ್ಯಾಂಕರ್ ಮೂಲಕ ಒದಗಿಸಲಾಯಿತು.

ಈಗಾಗಲೇ ಆರು ವಿಭಾಗಗಳಾಗಿ ವಿಂಗಡಿಸಿರುವ ಪ್ರದೇಶಗಳಿಗೂ ಒತ್ತಡದ ಕೊರತೆಯಿಂದ ಸರಿಯಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಂದು ಸಾಕಷ್ಟು ಪ್ರದೇಶಗಳಿಗೆ ನೀರು ಸರಬರಾಜಾಗದೆ ಸಮಸ್ಯೆ ಉಂಟಾಯಿತು.

ಸ್ವರ್ಣ ನದಿಯ ಮಾಣೈ, ಶಿರೂರು ಭಂಡಾರಿಬೆಟ್ಟು ಹಾಗೂ ಪುತ್ತಿಗೆಯಲ್ಲಿ ಒಟ್ಟು ಒಂಭತ್ತು ಬೋಟುಗಳಲ್ಲಿ ಪಂಪ್ ಆಳವಡಿಸಿ ಡ್ರೆಡ್ಜಿಂಗ್ ಕಾರ್ಯ ಶನಿವಾರವೂ ಮುಂದುವರೆದಿದ್ದು, ಈ ಮೂಲಕ ಬಜೆ ಅಣೆಕಟ್ಟಿನ ಜಾಕ್ ವೆಲ್‌ಗೆ ನೀರು ಹಾಯಿಸಲಾಗುತ್ತಿದೆ. ಇಂದು ನಸುಕಿನ ವೇಳೆ 12.30ರಿಂದ ಬೆಳಗಿನ ಜಾವ 4ಗಂಟೆವರೆಗೆ ಮತ್ತು ಬೆಳಗ್ಗೆ 10ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಿರಂತರ ಪಂಪಿಂಗ್ ಮಾಡಲಾಗಿದೆ.
ಸದ್ಯಕ್ಕೆ ದಿನಕ್ಕೆ ಆರರಿಂದ ಎಂಟು ಗಂಟೆಗಳ ಕಾಲ ಮಾತ್ರ ನೀರು ಪಂಪಿಂಗ್ ಮಾಡಲು ಸಾಧ್ಯವಾಗುತ್ತಿದ್ದು, 6-8 ಎಂಎಲ್‌ಡಿ ನೀರನ್ನು ಪೂರೈಕೆ ಮಾಡ ಲಾಗುತ್ತಿದೆ. ಶನಿವಾರ ನಿಗದಿಪಡಿಸಿದ ಎಲ್ಲ ಪ್ರದೇಶಗಳಿಗೂ ನೀರು ಪೂರೈಕೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸುಮಾರು ಐದು ಟ್ಯಾಂಕರ್‌ಗಳಲ್ಲಿ ನೀರನ್ನು ಸರಬರಾಜು ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಜಲಮೂಲಗಳ ಕೊರತೆಯ ಹಿನ್ನೆಲೆಯಲ್ಲಿ ಟ್ಯಾಂಕರಿಗೆ ಮಣಿ ಪಾಲದಲ್ಲಿರುವ ನಗರಸಭೆಯ ಶುದ್ದೀಕರಣ ಘಟಕದಿಂದಲೇ ನೀರು ಒದಗಿಸ ಲಾಗುತ್ತಿದೆ. ಇಂದ್ರಾಳಿ, ಮಂಚಿಕೋಡಿಯಲ್ಲಿ ನೀರು ಬಾರದ ಕಾರಣ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಯಿತು. ಕುಂಜಿಬೆಟ್ಟು ಪ್ರದೇಶ ದಲ್ಲಿ ಶೇ.70 ಮನೆಗಳಿಗೆ ನೀರು ಪೂರೈಕೆಯಾದರೂ ಶೇ.30ರಷ್ಟು ಮನೆಯವರು ನೀರು ಬಾರದೆ ತೊಂದರೆ ಅನುಭವಿಸಿದ ಬಗ್ಗೆ ದೂರುಗಳು ಕೇಳಿಬಂದವು.

ಮೂರನೆ ದಿನವೂ ಶ್ರಮದಾನ

ಉಡುಪಿಯ ಬಜೆ ಡ್ಯಾಂ ಬಳಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಮೂರನೆ ದಿನವಾದ ಶನಿವಾರವೂ ಶ್ರಮದಾನ ನಡೆಯಿತು.
ಇಂದು ಕೂಡ ಹಿಟಾಚಿಯಿಂದ ಬಂಡೆಗಳನ್ನು ಡ್ರಿಲ್ ಮಾಡಿ ಒಡೆಯ ಲಾಯಿತು. ಬಜೆ ಡ್ಯಾಂಗೆ ನೀರು ಹರಿಯುವ ಸ್ಥಳದಲ್ಲಿ ಇದ್ದ ಅಡೆತಡೆಗಳನ್ನು ನಿವಾರಿಸಿ ನೀರಿನ ಮಟ್ಟ ಹೆಚ್ಚಾಗುವಂತೆ ಮಾಡಲಾಯಿತು. ಜೆಸಿಬಿ ಹಾಗೂ ಕಲ್ಲು ಒಡೆಯುವ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಲಾಯಿತು.

ಈ ವೇಳೆ ಕಾಪು ಶಾಸಕ ಲಾಲಾಜಿ ಮೆಂಡನ್ ಸ್ಥಳಕ್ಕೆ ಆಗಮಿಸಿ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಈ ವೇಳೆ ಉಡುಪಿ ನಗರಸಭಾ ಸದಸ್ಯರು ಹಾಗೂ ಪಕ್ಷದ ವಿವಿಧ ಪದಾಧಿಕಾರಿಗಳು ಹಾಜರಿದ್ದರು.

ನೀರು ಪೂರೈಸುವ ಪ್ರದೇಶ

ಉಡುಪಿ ನಗರಸಭೆ ವ್ಯಾಪ್ತಿಯ ಅಜ್ಜರಕಾಡು ಕೋರ್ಟ್ ಬ್ಯಾಕ್ ರೋಡ್, ಕೆಎಂ ಮಾರ್ಗ, ಸರ್ವಿಸ್ ಬಸ್ಸು ನಿಲ್ದಾಣ, ಸಿಟಿ ಬಸ್ಸು ನಿಲ್ದಾಣ, ಬಡಗುಪೇಟೆ, ಕಲ್ಸಂಕ, ರಾಜಾಂಗಣ, ವಾದಿರಾಜ ಮಾರ್ಗ, ರಥಬೀದಿ, ಬೀಡಿನಗುಡ್ಡೆ, ಒಳಕಾಡು, ಹಳೇ ಸ್ಟೇಟ್ ಬ್ಯಾಂಕ್ ಓಣಿ, ಮಿಷನ್ ಕಂಪೌಂಡ್, ಪಿಪಿಸಿ ಬಳಿ, ಮೀನು ಮಾರುಕಟ್ಟೆ ಬಳಿ, ಕೊಳಂಬೆ, ಶಾಂತಿನಗರ, ಬಿ.ಬಿ.ನಗರ, ಸೆಟ್ಟಿಗಾರ್ ಕಾಲೋನಿ, ಪಿಡಬ್ಲುಡಿ ಕ್ವಾಟ್ರಸ್, ತೆಂಕಪೇಟೆ, ಶಾರದಾಂಬ ದೇವಸ್ಥಾನದ ಬಳಿ, ಚಿತ್ತರಂಜನ್ ಸರ್ಕಲ್ ಪ್ರದೇಶಗಳಿಗೆ ಮೇ 12ರಂದು ನೀರು ಸರಬ ರಾಜು ಮಾಡಲಾಗುವುದು. ಬೆಳಿಗ್ಗೆ ಅವಶ್ಯವಿರುವ ನೀರಿನ ಪ್ರಮಾಣ ಲಭ್ಯತೆ ಇಲ್ಲದಿದ್ದಲ್ಲಿ ಅಪರಾಹ್ನದ ನಂತರ ನೀರು ಸರಬರಾಜು ಮಾಡಲಾಗುವುದು ಎಂದು ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News