ಬಾಲಕೋಟ್ ದಾಳಿ: ನಿರೀಕ್ಷಿತ ಫಲಿತಾಂಶ ಸಿಗದೇ ಇರಲು ಪ್ರಧಾನಿ ಆದೇಶವೇ ಕಾರಣವೆ ?
ಬಾಲಕೋಟ್ ವಾಯುದಾಳಿಯನ್ನು ಮೋಡ ಕವಿದ , ದಾಳಿಗೆ ಸೂಕ್ತವಲ್ಲದ ವಾತಾವರಣದಲ್ಲಿ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆದೇಶ ನೀಡಿದ್ದು ಹೌದು ಎಂದಾದರೆ ಇದೇ ಆ ದಾಳಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗದಿರಲು ಕಾರಣವಾಗಿರಬಹುದು ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.
ಈ ಬಗ್ಗೆ ವಿಶೇಷ ವರದಿ ಮಾಡಿರುವ ಎನ್ ಡಿ ಟಿ ವಿ ಹಿರಿಯ ಪತ್ರಕರ್ತ ಹಾಗು ರಕ್ಷಣಾ ವಿಷಯಗಳ ತಜ್ಞ ವಿಷ್ಣು ಸೋಮ್ ಅವರು ಪ್ರಧಾನಿಯವರೇ ಹೇಳಿರುವಂತೆ ಮೋಡ ಕವಿದ ವಾತಾವರಣದಲ್ಲೂ ದಾಳಿ ನಡೆಸಲು ಅವರು ಹೇಳಿದ್ದರೆ ಅದು ದೇಶದ ಪಾಲಿಗೆ ನಷ್ಟ ತಂದಿರುವುದು ಖಚಿತ ಎಂದು ಹೇಳಿದ್ದಾರೆ.
ಈ ಬಗ್ಗೆ ಅವರು ನೀಡಿರುವ ವಿವರಣೆ ಇಲ್ಲಿದೆ :
ಬಾಲಕೋಟ್ ದಾಳಿಯಲ್ಲಿ ಒಟ್ಟು ಹನ್ನೆರಡು ಮಿರಾಜ್ 2000 ಫೈಟರ್ ವಿಮಾನಗಳನ್ನು ಬಳಸಲಾಗಿತ್ತು. ಅವುಗಳಲ್ಲಿ ಹನ್ನೆರಡು ದಾಳಿ ಕ್ಷಿಪಣಿ ಶಸ್ತ್ರಾಸ್ತ್ರಗಳಿದ್ದವು. ಆ ಪೈಕಿ ಆರು ಕ್ರಿಸ್ಟಲ್ ಮೇಜ್ಹ್ ಎಂಬ ಇಸ್ರೇಲಿ ಕ್ಷಿಪಣಿಗಳಿದ್ದವು. ಉಳಿದ ಆರು ಸ್ಪೈಸ್ 2000 ಎಂಬ ಕ್ಷಿಪಣಿಗಳು. ಈ ಸ್ಪೈಸ್ 2000 ಕ್ಷಿಪಣಿ ದಾಳಿ ಮಾಡಿ ಅದರ ಗುರಿಗೆ ಹೊಡೆದಿದೆ. ಈ ಕ್ಷಿಪಣಿಯ ದಾಳಿಯಿಂದ ಶತ್ರುಗಳಿಗೆ ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆ ಬೇರೆ ಬೇರೆ ಉತ್ತರಗಳಿವೆ. ಆದರೆ ಇದು ತನ್ನ ಗುರಿಗಳಿಗೆ ಹೊಡೆದಿದೆ ಎಂಬುದು ಮಾತ್ರ ಸತ್ಯ. ಆದರೆ ನಿಜವಾಗಿ ಭಾರತಕ್ಕೆ ಬೇಕಾಗಿದ್ದಿದ್ದು ಇದಲ್ಲ. ಭಾರತದ ಮುಖ್ಯ ಉದ್ದೇಶ ಇದ್ದಿದ್ದು ಇಸ್ರೇಲಿ ಕ್ಷಿಪಣಿ ಕ್ರಿಸ್ಟಲ್ ಮೇಜ್ಹ್ ಮೂಲಕ ದಾಳಿ ನಿಖರ ಗುರಿಗೆ ಹೊಡೆಯಬೇಕು ಎಂಬುದು. ಈ ಕ್ರಿಸ್ಟಲ್ ಮೇಜ್ಹ್ ಕ್ಷಿಪಣಿ ತಾನು ದಾಳಿ ಮಾಡಿ ನಾಶ ಮಾಡುವ ಗುರಿಯ ಸಂಪೂರ್ಣ ನೇರ ವಿಡಿಯೋ ಪ್ರಸಾರವನ್ನೂ ತೋರಿಸುತ್ತದೆ. ಆದರೆ ಈ ಆರರ ಪೈಕಿ ಒಂದೇ ಒಂದು ಕ್ಷಿಪಣಿ ಕೂಡ ಅಂದು ದಾಳಿ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಭಾರತಕ್ಕೆ ದಾಳಿಯ ನೇರ ವಿಡಿಯೋ ದೃಶ್ಯಗಳು ಸಿಗಲಿಲ್ಲ. ಇದಕ್ಕೆ ಕಾರಣ ಮೋಡ ಕವಿದ ವಾತಾವರಣ ಎಂದು ಹೇಳಲಾಗಿತ್ತು. ಈಗ ಅದನ್ನು ಸ್ವತಃ ಪ್ರಧಾನಿಯವರೇ ಒಪ್ಪಿಕೊಂಡಿದ್ದಾರೆ.
ಹಾಗಾಗಿ ಇದು ಕೇವಲ ಪ್ರಧಾನಿ ಮೋಡ ಹಾಗು ರೇಡಾರ್ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಂಡಿದ್ದಾರೆಯೇ ಎಂಬ ಚರ್ಚೆಗೆ ಸೀಮಿತವಲ್ಲ. ಪ್ರಧಾನಿಯವರೇ ಮೋಡ ಕವಿದ ವಾತಾವರಣದಲ್ಲಿ ದಾಳಿಗೆ ಆದೇಶ ನೀಡಿದೆವು ಎಂದು ಹೇಳಿದ್ದಾರೆ. ಕಳೆದ 48 ವರ್ಷಗಳಲ್ಲಿ ಭಾರತ ಮಾಡಿರುವ ಪ್ರಪ್ರಥಮ ವಾಯುದಾಳಿಯ ಮೇಲೆ ಈ ಆದೇಶ ಪ್ರತಿಕೂಲ ಪರಿಣಾಮ ಬೀರಿರುವುದು ಖಚಿತ. ಏಕೆಂದರೆ ಈ ಕ್ಷಿಪಣಿಗಳನ್ನು ಸರಿಯಾದ ಬೆಳಕಿಲ್ಲದ ಮೋಡ ಕವಿದ ವಾತಾವರಣದಲ್ಲಿ ಹಾರಿಸುವುದು ಸಾಧ್ಯವಿಲ್ಲ ಎಂದು ವಿಷ್ಣು ಸೋಮ್ ಹೇಳಿದ್ದಾರೆ.
ಇನ್ನು ವಾಯುದಾಳಿಯ ಸಂದರ್ಭದಲ್ಲಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಕೇಂದ್ರ ಹೇಳಿತ್ತು. ಆದರೆ ಈಗ ಅದು ಹಾಗಾಗಿರಲಿಲ್ಲ ಎಂಬುದು ಇಲ್ಲಿ ಸಾಬೀತಾಗಿದೆ. ನಿಜವಾಗಿಯೂ ಪ್ರಧಾನಿಯವರೇ ಇಂತಹ ಆದೇಶ ನೀಡಿದ್ದರೆ ದಾಳಿಗೆ ಕೇಂದ್ರ ಆದೇಶ ನೀಡಿದ ಮೇಲೆ ದಾಳಿ ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಂಬ ನಿರ್ಧಾರಗಳನ್ನು ಸೇನೆ ತನ್ನ ಅನುಭವ ಹಾಗು ಪರಿಣತಿ ಮೇಲೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಕೇಂದ್ರ ಮೂಗು ತೂರಿಸಿದೆ. ಇದು ಸೇನೆಯ ಕಾರ್ಯಾಚರಣೆ ಸ್ವಾತಂತ್ರ್ಯದಲ್ಲಿ ಕೇಂದ್ರದ ಹಸ್ತಕ್ಷೇಪ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗುವುದು ಸೇನಾ ಕಾರ್ಯಾಚರಣೆಯಲ್ಲಿ ಸರಿಯಲ್ಲ ಎಂದು ವಿಷ್ಣು ವಿವರಿಸಿದ್ದಾರೆ.