×
Ad

ಚಲನಶೀಲತೆ, ಸೃಜನಶೀಲತೆಯಿಂದ ಯಕ್ಷಗಾನ ಕಲೆ ಜೀವಂತ: ಡಾ.ಚಿನ್ನಪ್ಪ ಗೌಡ

Update: 2019-05-12 18:26 IST

ಉಡುಪಿ, ಮೇ 12: ಚಲನಶೀಲತೆ ಹಾಗೂ ಸೃಜನಶೀಲತೆಯಿಂದಾಗಿ ಪಾರಂಪರಿಕ ಯಕ್ಷಗಾನ ಕಲೆಯು ಇಂದಿಗೂ ಜೀವಂತವಾಗಿದೆ. ಇದರಿಂದಾಗಿ ಯಕ್ಷಗಾನ ಪರಂಪರೆಯನ್ನು ಯಾವುದೇ ಕ್ರಮ ಹಾಗೂ ವಿನ್ಯಾಸದಲ್ಲಿ ಮೆಚ್ಚುಗೆ, ಆಕ್ಷೇಪ, ಕ್ರಿಯೆ, ಪ್ರತಿಕ್ರಿಯೆಯನ್ನು ಸಲ್ಲಿಸಿದರೂ ಅದನ್ನು ಅಗರಗಿಸಿಕೊಳ್ಳುವ ಶಕ್ತಿ ಯಕ್ಷಗಾನ ರಂಗಕ್ಕೆ ಇದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಹಿರಿಯ ಯಕ್ಷಗಾನ ವಿದ್ವಾಂಸ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರಿಗೆ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಯಕ್ಷಗಾನಕ್ಕೆ ಶೈಕ್ಷಣಿಕವಾದ ಮೊದಲ ಮತ್ತು ಶೈಕ್ಷಣಿಕೇತರವಾದ ಎರಡನೆ ಬದುಕು ಎಂಬುದಿದೆ. ಯಕ್ಷಗಾನದ ಪ್ರಾಚೀನತೆ, ಸ್ವರೂಪ, ಪರಂಪರೆ, ಪ್ರಸಂಗ ಸಾಹಿತ್ಯ ಈ ರೀತಿಯ ಅಧ್ಯಯನ ಮತ್ತು ಸಂರಕ್ಷಣೆ ವಿದ್ವತ್ ವಲಯದ ಚರ್ಚೆ ವಿಶ್ಲೇಷಣೆಯೆೀ ಮೊದಲ ಬದುಕು ಆಗಿದೆ ಎಂದರು.

ಅದೇ ರೀತಿ ಯಕ್ಷಗಾನವನ್ನು ಮುಂದಿನ ತಲೆಮಾರಿಗೆ ದಾಟಿಸುವುದು, ಕಲಾವಿದರ ಸಮಸ್ಯೆ, ಕಲಾವಿದರ ರಾಷ್ಟ್ರೀಯ ವಿನಿಮಯ, ಯಕ್ಷಗಾನವನ್ನು ಬೇರೆ ಭಾಷೆ, ದೇಶಗಳಿಗೆ ತಲುಪಿಸುವುದು, ಅದರ ವಾಣಿಜ್ಯ ಮುಖಗಳೆಲ್ಲವೂ ಎರಡನೆ ಬದುಕಿಗೆ ಸಂಬಂಧಿಸಿದ್ದಾಗಿದೆ. ಇದು ಕೂಡ ಮೊದಲನೆ ಬದುಕಿನಷ್ಟೆ ಬಹಳ ಮುಖ್ಯವಾದುದು ಎಂದು ಅವರು ತಿಳಿಸಿದರು.

ಯಕ್ಷಗಾನದ ಕುರಿತ ಶೈಕ್ಷಣಿಕ ಚರ್ಚೆಗೆ ಪೂಂಜರ ಬದುಕು, ಬರಹ ಹಾಗೂ ಅನುಭವಗಳು ಅತ್ಯುತ್ತಮ ಆಕರವಾಗಲ್ಲಬಹುದು. ಯಕ್ಷಗಾನ ಮೊದಲ ಬದುಕಿನ ಕಾರಣಕ್ಕೆ ಶೈಕ್ಷಣಿಕವಾಗಿ ಅವರ ಕೆಲಸ ಕಾರ್ಯಗಳನ್ನು ಪರಿಶೀಲಿಸುವ ಅಗತ್ಯವಿದೆ. ಯಕ್ಷಗಾನ ಪಾರಂಪರೆಯ ಗಾಂಭಿರ್ಯ ಹಾಗೂ ಆಧುನಿಕದ ಉತ್ಸಾಹ ಪೂಂಜ ಅವರಲ್ಲಿದೆ. ಸಾಹಿತ್ಯ, ಬಣ್ಣ, ಮಾತು ಸೇರಿದಂತೆ ಹಲವು ತೂಕಗಳ ಸಮಾತೋಲ ತೂಕದ ಕಲೆ ಯಕ್ಷಗಾನ ಎಂದರು.

ಈ ಸಂದರ್ಭದಲ್ಲಿ ಭಾಗವತ, ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ದಂಪತಿ ಸನ್ಮಾನಿಸಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅಭಿನಂದನಾ ಭಾಷಣ ಮಾಡಿದರು.

ಕಟೀಲು ಮೇಳಗಳ ವ್ಯವಸ್ಥಾಪಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ಶಿವರಾಮ ಶೆಟ್ಟಿ, ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ಕಲಾರಂಗದ ಉಪಾಧ್ಯಕ್ಷ ಗಂಗಾಧರ ರಾವ್ ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೊಟ್ಟಿಕೆರೆ ಪುರು ಷೋತ್ತಮ ಪೂಂಜ ಅವರ ಯಕ್ಷಗಾನ ಕಾವ್ಯ ಪ್ರಸ್ತುತಿ ನಡೆಯಿತು.

‘ಜಾತಿ ಕಾರಣಕ್ಕೆ ವಿದ್ಯೆ ವಂಚಿತರು ಈಗಲೂ ಇದ್ದಾರೆ’
ಏಕಲವ್ಯನಿಗೆ ವಿದ್ಯಾಭ್ಯಾಸ ಮಾಡುವ ಅರ್ಹತೆಯನ್ನು ದ್ರೋರ್ಣ ಕೈಚೆಲ್ಲು ತ್ತಾನೆ. ಇದರಿಂದ ಆತನಲ್ಲಿ ವಿದ್ಯೆ ಕಲಿಯಬೇಕೆಂಬ ತುಡಿತ ಹೆಚ್ಚಾಯಿತೇ ಹೊರತು ಕಡಮೆ ಆಗಲಿಲ್ಲ. ಕೇವಲ ಜಾತಿಯ ಒಂದೇ ಕಾರಣಕ್ಕಾಗಿ ಏಕಲವ್ಯ ವಿದ್ಯೆಯಿಂದ ವಂಚಿತನಾದನು. ಇದೇ ರೀತಿ ಅಂತಹ ಏಕಲವ್ಯರಂತಹವರು ಸಮಾಜದಲ್ಲಿ ತುಂಬಾ ಮಂದಿ ಇಂದಿಗೂ ನಮ್ಮ ಕಣ್ಣ ಮುಂದೆ ಬದುಕುತಿದ್ದಾರೆ ಎಂದು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹೇಳಿದರು.

ಜಾತಿ ಹಾಗೂ ಕುಲಪ್ರಜ್ಞೆಯ ಸಮಸ್ಯೆ ಸಾರ್ವಕಾಲಿಕವಾದುದು. ಇವುಗಳು ಸಾಮಾಜಿಕ ವ್ಯಾದಿಗಳಾಗಿವೆ. ಸಾರ್ವಕಾಲಿಕ ಹಾಗೂ ಪ್ರಚಲಿತ ಸಮಸ್ಯೆಗಳನ್ನು ನಾನು ನನ್ನ ಪ್ರಸಂಗದಲ್ಲಿ ಯಕ್ಷಗಾನ ಚೌಕಟಿನಡಿ ಬೇರೆ ಬೇರೆ ರೂಪದಲ್ಲಿ ಚರ್ಚಿಸುವ ಪ್ರಯತ್ನಿಸಿದ್ದೇನೆ. ರಾಜರು ಕೆಳಜಾತಿ ಯವರನ್ನು ತಮ್ಮ ಒಣ ಪ್ರತಿಷ್ಠೆ ಬೇಕಾಗಿ ಸಾಕಷ್ಟು ಶೋಷಣೆಗೆ ಒಳಪಡಿಸಿದ ವಿಚಾರ ಕೂಡ ನನ್ನ ಪ್ರಸಂಗದಲ್ಲಿ ಬರುತ್ತದೆ. ಅದೇ ರೀತಿ ಪರಿಸರ ಪ್ರಜ್ಞೆ ಬಗ್ಗೆಯೂ ಚರ್ಚಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News