ಅಂತರ್ ಜಿಲ್ಲಾ ಈಜು ಸ್ಪರ್ಧೆ: ಜೈಹಿಂದ್ ಸ್ವಿಮ್ಮಿಂಗ್ ಕ್ಲಬ್‌ಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ
ಮಂಗಳೂರು, ಮೇ 12: ಜೈಹಿಂದ್ ಸ್ವಿಮ್ಮಿಂಗ್ ಕ್ಲಬ್ ಹಾಗೂ ದ.ಕ. ಜಿಲ್ಲಾ ಸ್ವಿಮ್ಮಿಂಗ್ ಅಸೋಸಿಯೇಶನ್‌ಗಳ ಸಂಯುಕ್ತಾಶ್ರದಲ್ಲಿ ನಗರದ ಮಂಗಳಾ ಈಜುಕೊಳದಲ್ಲಿ ನಡೆದ ಅಂತರ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಜೈಹಿಂದ್ ಸ್ವಿಮ್ಮಿಂಗ್ ಕ್ಲಬ್‌ಗೆ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ನಗರದ ಮಂಗಳಾ ಈಜುಕೊಳದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಅಂತರ್‌ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ದ.ಕ., ಉಡುಪಿ, ಹಾಸನ, ಕೊಡಗು, ದಾವಣಗೆರೆ ಹಾಗೂ ಬೆಂಗಳೂರು ಜಿಲ್ಲೆಗಳಿಂದ 150 ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು. ಆರು ವರ್ಷದಿಂದ 16 ವರ್ಷದ ವಯೋ ಮಾನದವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಟ್ಟು ಏಳು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.
ಪ್ರಥಮ ಸ್ಥಾನವನ್ನು ಜೈಹಿಂದ್ ಸ್ವಿಮ್ಮಿಂಗ್ ಕ್ಲಬ್ ಪಡೆದುಕೊಂಡರೆ, ಪುತ್ತೂರು ಅಕ್ವೇಟಿಕ್ ಕ್ಲಬ್ ತಂಡವು ದ್ವೀತಿಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. ಬೆಂಗಳೂರು, ಹಾಸನ ಹೊರತುಪಡಿಸಿದರೆ ದ.ಕ. ಜಿಲ್ಲೆಯಿಂದ ಅತಿಹೆಚ್ಚು ಸ್ಪರ್ಧಾಳುಗಳು ಆಗಮಿಸಿದ್ದರು. ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಈಜು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
‘ಸ್ಪರ್ಧೆಯ ಮೂಲ ಉದ್ದೇಶವು ಜಿಲ್ಲೆಯಲ್ಲಿ ಹೆಚ್ಚು ಈಜುಪಟುಗಳ ಪ್ರತಿಭೆಗೆ ಅವಕಾಶ ಕಲ್ಪಿಸಿಕೊಡುವುದಾಗಿದೆ. ಜಿಲ್ಲೆಯ ಪ್ರತಿ ಮೂಲೆಯ ಜನರು ಈಜನ್ನು ಕಲಿಯಬೇಕು. ಸ್ಪರ್ಧೆಯ ಯಶಸ್ವಿಗಾಗಿ ಜಿಲ್ಲಾ ದೈಹಿಕ ಶಿಕ್ಷಕರು, ವಿವಿಧ ಅಸೋಸಿಯೇಶನ್‌ಗಳು, ರೆಫರಿಗಳು, ತರಬೇತು ದಾರರು ಶ್ರಮ ವಹಿಸಿದ್ದಾರೆ’ ಎಂದು ಜೈಹಿಂದ್ ಸ್ವಿಮ್ಮಿಂಗ್ ಕ್ಲಬ್‌ನ ತರಬೇತುದಾರ ರಾಮಕೃಷ್ಣ ರಾವ್ ತಿಳಿಸಿದ್ದಾರೆ.