ಬಿಜೆಪಿ,ಆರೆಸ್ಸೆಸ್ ಕಾರ್ಯಕರ್ತರು ಕೇಂದ್ರೀಯ ಪಡೆಗಳ ಸಮವಸ್ತ್ರದಲ್ಲಿ ಪ.ಬಂಗಾಳ ಪ್ರವೇಶಿಸುತ್ತಿದ್ದಾರೆ: ಮಮತಾ ಬ್ಯಾನರ್ಜ
ಕೋಲ್ಕತಾ,ಮೇ 12: ಪ.ಬಂಗಾಳದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿ ಸರಕಾರವು ಕೇಂದ್ರೀಯ ಪಡೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ರವಿವಾರ ಪುನರುಚ್ಚರಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಚುನಾವಣೆಗಳನ್ನು ನಡೆಸಲು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರು ಕೇಂದ್ರೀಯ ಪಡೆಗಳ ಸಮವಸ್ತ್ರಗಳನ್ನು ಧರಿಸಿ ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂಬ ಭೀತಿ ಕಾಡುತ್ತಿದೆ ಎಂದು ಹೇಳಿದರು.
ದಕ್ಷಿಣ 24 ಪರಗಣಗಳ ಜಿಲ್ಲೆಯ ಬಸಂತಿ ಪ್ರದೇಶದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು,ಕೇಂದ್ರೀಯ ಪಡೆಗಳನ್ನು ತಾನು ಅಗೌರವಿಸುವುದಿಲ್ಲ. ಆದರೆ ಮತದಾರರ ಮೇಲೆ ಪ್ರಭಾವ ಬೀರುವಂತೆ ಅವರಿಗೆ ಸೂಚಿಸಲಾಗುತ್ತಿದೆ. ಪ.ಬಂಗಾಳದಲ್ಲಿ ಕೇಂದ್ರೀಯ ಪಡೆಗಳನ್ನು ನಿಯೋಜಿಸುವ ನೆಪದಲ್ಲಿ ಬಿಜೆಪಿಯು ಬಲಾತ್ಕಾರದಿಂದ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರನ್ನು ಇಲ್ಲಿಗೆ ದಬ್ಬುತ್ತಿದೆ ಎಂದು ಆರೋಪಿಸಿದರು.
ಕೇಂದ್ರೀಯ ಪಡೆಗಳ ಸಿಬ್ಬಂದಿಗಳು ಬಿಜೆಪಿ ಪರವಾಗಿ ಮತ ಚಲಾಯಿಸುವಂತೆ ಮತಗಟ್ಟೆಗಳಲ್ಲಿ ಸರದಿ ಸಾಲುಗಳಲ್ಲಿ ನಿಂತಿರುವ ಮತದಾರರಿಗೆ ಸೂಚಿಸುತ್ತಿದ್ದಾರೆ ಎಂದು ಆರೋಪಿಸಿದ ಮಮತಾ,ಮೋದಿ ಸರಕಾರವು ಇಲ್ಲಿ ಚುನಾವಣೆ ಕೆಲಸಕ್ಕೆ ಕೆಲವು ನಿವೃತ್ತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದೆ ಮತ್ತು ಅವರು ತಮ್ಮ ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ ಎಂದರು.