ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಆಟೋ ಡ್ರೈವರ್ 18 ದಿನ ಮಗುವಿನ ಆರೈಕೆ ಮಾಡಿದರು !

Update: 2019-05-12 13:31 GMT
ಸಾಂದರ್ಭಿಕ ಚಿತ್ರ (Wikimedia Commons)

ಬೆಂಗಳೂರು: ಪ್ರಯಾಣಿಕರೊಬ್ಬರನ್ನು ಎಪ್ರಿಲ್ 15ರಂದು ರೈಲು ನಿಲ್ದಾಣಕ್ಕೆ ಬಿಟ್ಟು ಮನೆಗೆ ಹೋಗುತ್ತಿದ್ದ ಆಟೊ ಚಾಲಕ ಬಾಬು ಮುದ್ರಪ್ಪ ಅವರಿಗೆ ಗರ್ಭಿಣಿ ಮಹಿಳೆಯೊಬ್ಬರ ಆಕ್ರಂದನ ಕೇಳಿಸಿತು. ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದಾಗದಿದ್ದಾಗ ಬಾಬು ಆಕೆಯ ನೆರವಿಗೆ ಬಂದು ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ದರು.

ಸಿ.ವಿ.ರಾಮನ್ ಆಸ್ಪತ್ರೆಗೆ ಮಹಿಳೆಯನ್ನು ಕರೆದೊಯ್ದಾಗ, ಆಕೆಯ ಸಂಬಂಧಿಕರು ಅಥವಾ ಸ್ನೇಹಿತರನ್ನು ಪ್ರವೇಶ ಅರ್ಜಿ ತುಂಬಲು ಕರೆ ತರುವಂತೆ ಬಾಬುವನ್ನು ಆಸ್ಪತ್ರೆ ಸಿಬ್ಬಂದಿ ಕೇಳಿದರು. ಗರ್ಭಿಣಿ ಮಹಿಳೆ ತನ್ನ ಹೆಸರನ್ನು ನಂದಿತಾ ಎಂದು ನಮೂದಿಸಿದರು. ಅಸಹಾಯಕ ಮಹಿಳೆಯ ಪ್ರವೇಶದ ಅರ್ಜಿಯನ್ನು ಬಾಬು ಸ್ವತಃ ತುಂಬಿದರು. "ಆಕೆಯನ್ನು ಹಾಗೆಯೇ ಬಿಟ್ಟು ಹೋಗಲು ಆತ್ಮಸಾಕ್ಷಿ ಒಪ್ಪಲಿಲ್ಲ" ಎಂದು ಬಾಬು ಹೇಳುತ್ತಾರೆ.

ರಾತ್ರಿ 9.30ರ ವೇಳೆಗೆ ಮಹಿಳೆ ಹೆಣ್ಣುಮಗುವಿಗೆ ಜನ್ಮ ನೀಡುವವರೆಗೂ ಬಾಬು ಕಾದರು. ಅವಧಿಪೂರ್ವ ಪ್ರಸವದ ಕಾರಣದಿಂದ ನವಜಾತ ಶಿಶುವಿಗೆ ತೀವ್ರತರ ಉಸಿರಾಟದ ತೊಂದರೆ ಇತ್ತು.

ಇಡೀ ದಿನ ಆಸ್ಪತ್ರೆಯಲ್ಲಿ ಕಾದ ಕಾರಣದಿಂದ ಬಾಬು ಅವರಿಗೆ ಆ ದಿನದ ಆದಾಯಕ್ಕೆ ಕತ್ತರಿ ಬಿತ್ತು. ಜತೆಗೆ ಸಂಕಷ್ಟದಲ್ಲಿದ್ದ ಮಗುವನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಕರೆದೊಯ್ಯುವ ಹೊಣೆಯೂ ಇವರ ಹೆಗಲೇರಿತು. ಅಲ್ಲೂ ಪುಟ್ಟ ಮಗುವಿನ ಪ್ರವೇಶ ವಿಧಿವಿಧಾನವನ್ನು ಬಾಬು ಪೂರೈಸಬೇಕಾಯಿತು.

ತಡರಾತ್ರಿ ಮನೆಗೆ ಬಂದ ಬಳಿಕ ಬಟ್ಟೆ ಬದಲಿಸಿ, ಸಿ.ವಿ.ರಾಮನ್ ಆಸ್ಪತ್ರೆಯಲ್ಲಿದ್ದ ತಾಯಿಯ ಸ್ಥಿತಿ ತಿಳಿಯಲು ಹೊರಟರು. ಆಸ್ಪತ್ರೆಗೆ ಹೋದಾಗ ನಂದಿತಾ ಅಲ್ಲಿಂದ ಹೊರಟು ಹೋದ ವಿಷಯ ತಿಳಿದುಬಂತು.

"ನವಜಾತ ಶಿಶುವನ್ನು ಬಿಟ್ಟು ಮಹಿಳೆ ತೆರಳಿದ್ದು ನನಗೆ ಅತ್ಯಂತ ಘೋರ ಕ್ಷಣ ಎನಿಸಿತು. ನನಗೂ ಮಕ್ಕಳಿದ್ದಾರೆ. ಮಕ್ಕಳನ್ನು ಬಿಟ್ಟು ಓಡಿಹೋಗುವುದು ಪೋಷಕರು ಮಾಡಬಹುದಾದ ಅತ್ಯಂತ ಹೀನ ಕಾರ್ಯ" ಎಂದು 29 ವರ್ಷದ ಬಾಬು ಉದ್ಗರಿಸುತ್ತಾರೆ.

ಮುಂದೆ ಸತತ 18 ದಿನ ಕೆಲಸ ಮುಗಿಸಿ ಬಾಬು ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಆಸ್ಪತ್ರೆ ಬಿಲ್ ಪಾವತಿಯಿಂದ ಹಿಡಿದು, ಔಷಧಿ ತರುವುದು, ಶಿಶುವಿನ ಕಾಳಜಿ ವಹಿಸುವುದು ಹೀಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಎಲ್ಲ ಕರ್ತವ್ಯ ನಿಭಾಯಿಸಿದರು.

ಆದಾಗ್ಯೂ ಮೇ 4ರಂದು ಮಗುವಿನ ಆರೋಗ್ಯ ಕ್ಷೀಣಿಸಿ, ಕೊನೆಯುಸಿರೆಳೆಯಿತು. ಮಗುವಿನ ಅಂತ್ಯಸಂಸ್ಕಾರ ನೆರವೇರಿಸಲು ಕೂಡಾ ಬಾಬು ಮುಂದಾದರೂ, ಆಸ್ಪತ್ರೆಯವರು ಅದಕ್ಕೆ ಅವಕಾಶ ನೀಡಲಿಲ್ಲ. ಸ್ವಂತ ಮಗಳಿನಂತೆ 18 ದಿನ ಕಾಳಜಿ ವಹಿಸಿದ್ದ ಮಗುವಿನ ಅಗಲಿಕೆ ಬಾಬು ಅವರಿಗೆ ತೀರಾ ಬೇಸರ ತಂದಿತು.

ಯಾವ ತಾಯಿಯೂ ಮಕ್ಕಳಿಗೆ ಹೀಗೆ ಮಾಡಬಾರದು ಎಂಬ ಸಲುವಾಗಿ ಬಾಬು ಇಂದಿರಾ ನಗರ ಠಾಣೆಯಲ್ಲಿ ನಂದಿತಾ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಸಹೃದಯಿಯ ಸೇವೆ ಇಷ್ಟಕ್ಕೇ ಸೀಮಿತವಲ್ಲ. ಈ ಹಿಂದೆಯೂ ರಿಕ್ಷಾದಲ್ಲಿ ಬಿಟ್ಟುಹೋದ ಪ್ರಯಾಣಿಕರ ಪರ್ಸ್ ಮರಳಿಸಿದ್ದಾರೆ. ವ್ಯಕ್ತಿಯೊಬ್ಬರನ್ನು ಸಂಕಷ್ಟದಲ್ಲಿದ್ದಾಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಯಾವ ಪ್ರಯಾಣಿಕರಿಗೂ ಇಂಥ ಕಡೆಗೆ ಬರುವುದಿಲ್ಲ ಎಂದು ನಿರಾಕರಿಸಿದ ನಿದರ್ಶನ ಇಲ್ಲ.

"ಪ್ರಯಾಣಿಕರು ನನ್ನ ದೇವರು. ನನ್ನ ಕುಟುಂಬಕ್ಕಾಗಿ ಗಳಿಸಲು ಅವರು ನನಗೆ ನೆರವಾಗುತ್ತಾರೆ. ಸಹಜೀವಿಗಳಿಗೆ ನೆರವು ನೀಡುವುದು ಒಳ್ಳೆಯ ಕಾರ್ಯ. ನನ್ನ ಕೊನೆಯುಸಿರು ಇರುವವರೆಗೂ ಅದನ್ನು ಮುಂದುವರಿಸುತ್ತೇನೆ"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News