ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಮೂರನೇ ಹಂತದ ಸ್ವಚ್ಚತಾ ಕಾರ್ಯಕ್ರಮ
ಪುತ್ತೂರು: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛ ಪುತ್ತೂರು ಕಾರ್ಯಕ್ರಮದ ಮೂರನೇ ಹಂತದ ಆರನೇ ಕಾರ್ಯಕ್ರಮ ಪುತ್ತೂರು ತಾಲೂಕಿನ ನೆಹರೂ ನಗರದ ವಿವೇಕಾನಂದ ಕಾಲೇಜು ರಸ್ತೆಯಲ್ಲಿ ರವಿವಾರ ನಡೆಯಿತು.
ಸ್ವಚ್ಛ ಪುತ್ತೂರು ತಂಡದ ಹಿರಿಯ ಕಾರ್ಯಕರ್ತ ಎಂ.ಎಸ್. ಭಟ್ ವೇದಮಂತ್ರ ಘೋಷಿಸಿ, ಧ್ವಜ ಹಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸ್ವಚ್ಛ ಪುತ್ತೂರು ತಂಡದವರಿಂದ ಸ್ವಚ್ಛ ಅಭಿಯಾನ ನಡೆಯುವ ಮೂಲಕ ಜಾಗೃತಿ ಮೂಡಿಸುತ್ತಾ ಬರಲಾಗಿದೆ. ಪ್ರತಿಫಲವಾಗಿ ಎಲ್ಲೆಂದರಲ್ಲಿ ಕಸ ಬೀಳುವ ಪ್ರಮಾಣ ಕಡಿಮೆಯಾಗಿದೆ. ಈ ಪ್ರಯತ್ನವನ್ನು ಮುಂದುವರಿಸೋಣ ಎಂದರು.
ವಿವೇಕಾನಂದ ವಿದ್ಯಾಸಂಸ್ಥೆಗಳ ಸುಮಾರು ಎಂಟು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಹಲವು ಪಿಜಿಗಳಲ್ಲಿ ವಾಸಿಸುವವರು, ಅಂಗಡಿಗಳು, ಹೊಟೇಲ್, ಜಿಮ್, ನಾಗರಿಕರು ಸೇರಿದಂತೆ ದಿನನಿತ್ಯ ಹತ್ತು ಸಾವಿರಕ್ಕೂ ಅಧಿಕ ಮಂದಿ ಸಂಚರಿಸುವ ಪ್ರದೇಶ ಇದಾಗಿದ್ದು, ಶೈಕ್ಷಣಿಕ ಪ್ರೌಢಿಮೆಯನ್ನು ಪಡೆದಿದ್ದರೂ ಪರಿಸರದ ಪರಿಸ್ಥಿತಿಯನ್ನು ಗಮನಿಸಿದಾಗ ಇವರೆಲ್ಲಾ ಶಿಕ್ಷಿತರೇ ಎಂಬ ಅನುಮಾನ ಶುರುವಾಯಿತು. ಎಲ್ಲೆಂದರಲ್ಲಿ ಕಸ ಬಿಸಾಡುವ ಮೂಲಕ ಅನಾಗರಿಕ ಪ್ರವೃತ್ತಿಯನ್ನು ಮರೆದಿದ್ದಾರೆ. ಈ ಅವ್ಯವಸ್ಥೆ ಮುಂದುವರಿದರೆ ತೊಂದರೆ ಕಟ್ಟಿಟ್ಟ ಬುತ್ತಿ. ಇದನ್ನು ಮನಗಂಡು ಈ ಬಾರಿ ಈ ಪ್ರದೇಶದಲ್ಲಿ ಜಾಗೃತಿ ಮೂಡಿಸು ವುದಕ್ಕಾಗಿ ಸ್ವಚ್ಛತೆ ಅಭಿಯಾನ ಕೈಗೊಳ್ಳಲಾಯಿತು ಎಂದು ಎಂ.ಎಸ್. ಭಟ್ ಹೇಳಿದರು.
ಉಪನ್ಯಾಸಕ ಗೋಪಾಲಕೃಷ್ಣ ಭಟ್ ಮಾತನಾಡಿ, ಜನರಲ್ಲಿ ಸ್ವಚ್ಛತೆ ಕುರಿತ ಅರಿವು ಮೂಡಿಸುವ ಕೆಲಸ ಇನ್ನೂ ಸಾಗಬೇಕಾಗಿದೆ. ಯಾಕೆಂದರೆ ಸ್ವಚ್ಛಗೊಳಿಸಿದ ಜಾಗದಲ್ಲಿ ಮತ್ತೂ ಕಸ ಬೀಳುತ್ತಿದೆ. ಇದು ನಿಲ್ಲುವ ತನಕ ಅಭಿಯಾನ ಮುಂದುವರಿಸೋಣ ಎಂದರು.
ಕಾರ್ಯಕ್ರಮದಲ್ಲಿ ತಂಡದ ಸಂಯೋಜಕ ಜಿ.ಕೃಷ್ಣ, ಶಂಕರ ಮಲ್ಯ, ದೇವಿಪ್ರಸಾದ್ ಮಲ್ಯ, ಸುರೇಶ್ ಕಲ್ಲಾರೆ, ಸುರೇಶ್ ಶ್ರೀಶಾಂತಿ, ದಿನೇಶ್ ಜೈನ್, ಜಯಪ್ರಕಾಶ್, ವಿಜೇತಾ ಬಲ್ಲಾಳ್, ಶ್ರೀಧರ ಯು.ಕೆ., ಸಂತೋಷ್ ವಾಗ್ಲೆ, ನಾಗೇಶ್ ಕೆಮ್ಮಾಯಿ, ಪುರುಷೋತ್ತಮ, ಹರ್ಷೇಂದ್ರ, ಮನೋಜ್ ಪಡ್ಡಾಯೂರ್, ದಯಾನಂದ, ಧನುಷ್, ಮೈತ್ರಿ, ಭಾಗ್ಯ ಸೇರಿದಂತೆ ಸುಮಾರು 30 ಕ್ಕೂ ಅಧಿಕ ಮಂದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.