×
Ad

ಪುತ್ತೂರು: ವೃದ್ಧ ದಂಪತಿಯನ್ನು ಹೊರಹಾಕಿ ಮನೆ ಕೆಡವಿದ ಮಕ್ಕಳು !

Update: 2019-05-12 20:31 IST

ಪುತ್ತೂರು: ವಯೋವೃದ್ಧ ದಂಪತಿಯನ್ನು ಮಕ್ಕಳೇ ಬಲವಂತದಿಂದ ಹೊರದಬ್ಬಿ ಮನೆಯನ್ನು ಕೆಡವಿ ಹಾಕಿದ ಘಟನೆ ಪುತ್ತೂರು ನಗರ ಠಾಣೆ ವ್ಯಾಪ್ತಿಯ ಕೆದಿಲ ಎಂಬಲ್ಲಿಂದ ವರದಿಯಾಗಿದ್ದು, ಗಾಯಾಳು ವೃದ್ಧರು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೆದಿಲ ಗ್ರಾಮದ ಬೀಟಿಗೆ ಆರ್.ಕೆ. ಮಂಝಿಲ್ ನಿವಾಸಿ ಮಹಮ್ಮದ್ (75) ಮತ್ತು ಅವರ ಪತ್ನಿ ಖತಿಜಮ್ಮ(72) ಮನೆಯಿಂದ ಹೊರಹಾಕಲ್ಪಟ್ಟವರು. ಅವರಿಬ್ಬರಿಗೂ ಗಾಯವಾಗಿದ್ದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನನ್ನ 9 ಮಕ್ಕಳ ಪೈಕಿ ಮೂವರು ಮನೆಯಿಂದ ಹೊರ ಹಾಕಿದ್ದಾರೆಂದು ಅವರು ಆರೋಪಿಸಿದ್ದಾರೆ.

''ನಾನು ಬೀಟಿಗೆಯಲ್ಲಿ ಮನೆ ಮಾಡಿ ವಾಸ್ತವ್ಯ ಹೊಂದಿದ್ದು, ನನ್ನ ನಾಲ್ವರು ಪುತ್ರರು ಮತ್ತು ಐವರು ಪುತ್ರಿಯರ ವಿವಾಹದ ಬಳಿಕ ಅವರೆಲ್ಲಾ ಬೇರೆ ಬೇರೆ ಕಡೆ ವಾಸ್ತವ್ಯ ಹೊಂದಿದ್ದಾರೆ. ಬೀಟಿಗೆ ಮನೆಯಲ್ಲಿ ನಾನು ನನ್ನ ಪತ್ನಿ ಮಾತ್ರ ವಾಸ್ತವ್ಯ ಹೊಂದಿದ್ದು, ನನ್ನ 2ನೇ ಪುತ್ರ ಇಸ್ಮಾಯಿಲ್‍ನ ಮಗಳ ವಿವಾಹ ಸಮಾರಂಭಕ್ಕೆಂದು ಪುತ್ರನೊಂದಿಗೆ ಎ.6ರಂದು ಆತ ವಾಸ್ತವ್ಯ ಹೊಂದಿರುವ ನಂದಿಲಕ್ಕೆ ಹೋಗಿದ್ದೆ. ಮೇ 10ಕ್ಕೆ ಬೀಟಿಗೆ ಮನೆಗೆ ಹಿಂದಿರುಗಿದ್ದು, ನಂತರ ನನ್ನ 3ನೇ ಪುತ್ರ ಬುಡೋಳಿಯಲ್ಲಿರುವ ತಾಜುದ್ದೀನ್, ಆತನ ಪತ್ನಿ ಯಾಸೀರಾ, 4ನೇ ಪುತ್ರ ಕಬಕ ನಿವಾಸಿ ಸಂಶುದ್ದೀನ್, ಆತನ ಪತ್ನಿ ಫಾತಿಮಾ ಹಾಗೂ  2ನೇ ಪುತ್ರಿ ಐಸಮ್ಮ ಮತ್ತು ಆಕೆಯ ಪತಿ ಮಹಮ್ಮದ್, ಅವರ ಪುತ್ರ ಹಾರಿಸ್ ಎಂಬವರು ಕಾರು ಮತ್ತು ಬೈಕ್‍ನಲ್ಲಿ ಬಂದು ಯಾವುದೇ ಸೂಚನೆ ನೀಡದೆ ಹಿಟಾಚಿಯಿಂದ ನಮ್ಮ ಮನೆಯನ್ನು ಕೆಡವಲು ಮುಂದಾದರು. ನಾನು ಮತ್ತು ನನ್ನ ಪತ್ನಿ ಮನೆಯಿಂದ ಹೊರಗಡೆ ಬಾರದೆ ಇದ್ದಾಗ ನಮ್ಮನ್ನು ಬಲತ್ಕಾರವಾಗಿ ಎಳೆದು ಕೊಂಡು ಹೋಗಿ ತೆಂಗಿನ ಮರದ ಬುಡದಲ್ಲಿ ಕುಳ್ಳಿರಿಸಿದ್ದಾರೆ. ಬಳಿಕ ಮನೆಯನ್ನು ಹಿಟಾಚಿ ಮೂಲಕ ಕೆಡವಿದ್ದಾರೆ. ಘಟನೆಯ ಕುರಿತು ನಾನು, ನನ್ನ 2ನೇ ಪುತ್ರ ಇಸ್ಮಾಯಿಲ್‍ಗೆ ಮಾಹಿತಿ ನೀಡಿದಾಗ ಆತ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸ್ ಸ್ಥಳಕ್ಕೆ ಬಂದು ಹಿಟಾಚಿ ಕೆಲಸವನ್ನು ನಿಲ್ಲಿಸಿದ್ದಾರೆ. ವೃದ್ಧರಾದ ನಮ್ಮನ್ನು ಬಲತ್ಕಾರವಾಗಿ ಎಳೆದು ಹೊರ ಹಾಕಿದ್ದರಿಂದ ನಮಗೆ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇವೆ ಎಂದು ಮಹಮ್ಮದ್ ಅವರು ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿ ಪುತ್ತೂರು ಪೊಲೀಸರು ಗಾಯಾಳುವಿನಿಂದ ಮಾಹಿತಿ ಪಡೆದಿದ್ದಾರೆ. ಜಾಗದ ವಿಚಾರಕ್ಕೆ ಸಂಬಂಧಿಸಿ ನನ್ನ ಸಹೋದರರು ಈ ಕೃತ್ಯ ಎಸಗಿದ್ದಾರೆ ಎಂದು ಇಸ್ಮಾಯಿಲ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News