ಹಿಂದೂಜಾ ಸಹೋದರರು ಬ್ರಿಟನ್‌ನ ಅತ್ಯಂತ ಶ್ರೀಮಂತರು

Update: 2019-05-12 16:36 GMT

ಲಂಡನ್,ಮೇ.12: ಬ್ರಿಟನ್‌ನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರೇ ಅಧಿಪತ್ಯ ಸಾಧಿಸಿದ್ದು ಮೊದಲ ಸ್ಥಾನದಲ್ಲಿ ಹಿಂದೂಜಾ ಸಹೋದರರಿದ್ದರೆ ಮುಂಬೈ ಮೂಲದ ರೂಬೆನ್ ಸಹೋದರರು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಬ್ರಿಟನ್‌ನಲ್ಲಿ ಹಿಂದೂಜಾ ಗ್ರೂಪ್ ಆಫ್ ಕಂಪೆನೀಸ್ ನಡೆಸುತ್ತಿರುವ ಶ್ರೀ ಮತ್ತು ಗೋಪಿಚಂದ್ ಹಿಂದೂಜಾ ತಮ್ಮ ಸಂಪತ್ತಿನಲ್ಲಿ ಕಳೆದ ವರ್ಷಕ್ಕಿಂತ 1.35 ಬಿಲಿಯನ್ ಪೌಂಡ್‌ಗಳ ಏರಿಕೆಯನ್ನು ದಾಖಲಿಸುವ ಮೂಲಕ ಮತ್ತೊಮ್ಮೆ ಸಂಡೆ ಟೈಮ್ಸ್ ರಿಚ್ ಲಿಸ್ಟ್‌ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಸದ್ಯ ಹಿಂದೂಜಾ ಸಹೋದರರ ಒಟ್ಟು ಆಸ್ತಿ ಮೌಲ್ಯ 22 ಬಿಲಿಯನ್ ಪೌಂಡ್‌ಗಳಾಗಿವೆ. ಇನ್ನು ಮುಂಬೈ ಮೂಲದ ಹೂಡಿಕೆದಾರ ಸಹೋದರರಾದ ಡೇವಿಡ್ ಮತ್ತು ಸೈಮನ್ ರೂಬೆನ್ ಟೈಮ್ಸ್ ರಿಚ್ ಲಿಸ್ಟ್‌ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. 2018ರಲ್ಲಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ರೂಬೆನ್ ಸಹೋದರರ ಆಸ್ತಿಯಲ್ಲಿ ಒಂದು ವರ್ಷದಲ್ಲಿ 3.56 ಬಿಲಿಯನ್ ಪೌಂಡ್‌ಗಳ ಏರಿಕೆಯಾದ ಪರಿಣಾಮ ಈ ವಿತ್ತೀಯ ವರ್ಷದಲ್ಲಿ ಬ್ರಿಟನ್‌ನ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಭಾರತೀಯ ಮೂಲದ ಇನ್ನೋರ್ವ ಬಿಲಿಯನೇರ್ ಲಕ್ಷ್ಮಿ ಎನ್.ಮಿತ್ತಲ್ ಅವರು ಪ್ರಸಕ್ತ ವರ್ಷದಲ್ಲಿ 3.99 ಬಿಲಿಯನ್ ಪೌಂಡ್ ನಷ್ಟ ಅನುಭವಿಸಿದ ಪರಿಣಾಮ 2018ರ ಐದನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಕುಸಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News