40 ಲಕ್ಷ ರೂ. ವಂಚನೆ ಆರೋಪ: ಕಾಶಿಮಠದ ಸಮ್ಯಾಮಿಂದ್ರತೀರ್ಥ ಶ್ರೀ ವಿರುದ್ಧ ದೂರು ದಾಖಲು
ಮಂಗಳೂರು, ಮೇ 12: ಬ್ಯಾಂಕ್‌ವೊಂದರಲ್ಲಿ ಸ್ಥಿರ ಠೇವಣಿ ಇರಿಸಿದ್ದ ಮೂಲ ರಶೀದಿ ಬಳಸಿಕೊಂಡು ಲಕ್ಷಾಂತರ ರೂ. ವಂಚಿಸಿದ ಆರೋಪದಲ್ಲಿ ಕಾಶಿಮಠದ ಸಮ್ಯಾಮಿಂದ್ರತೀರ್ಥ ಶ್ರೀ ಸೇರಿದಂತೆ ಮೂವರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಕಾಶಿಮಠದ ಸಮ್ಯಾಮಿಂದ್ರತೀರ್ಥ ಶ್ರೀ ಯಾನೆ ಉಮೇಶ್ ಮಲ್ಲನ್ (35), ಸುರತ್ಕಲ್ ಇಡ್ಯಾ ಗ್ರಾಮದ ಕರ್ನಾಟಕ ಬ್ಯಾಂಕ್‌ನ ಆರ್‌ಇಪಿ (ರೆಪ್) ಮ್ಯಾನೇಜರ್ ಹಾಗೂ ಸುರತ್ಕಲ್ ಬ್ರಾಂಚ್‌ನ ಮ್ಯಾನೇಜರ್ ಆರೋಪಿಗಳು.
ಪ್ರಕರಣ ವಿವರ: ಎಚ್.ಎಚ್. ರಾಘವೇಂದ್ರತೀರ್ಥ ಸ್ವಾಮೀಜಿ ಎಂಬವರು ತನ್ನ ಹೆಸರಲ್ಲಿ 1999ರ ಫೆಬ್ರವರಿ 10ರಂದು 10 ಲಕ್ಷ ರೂ. ನಗದನ್ನು ಸುರತ್ಕಲ್ ಇಡ್ಯಾದ ಕರ್ನಾಟಕ ಬ್ಯಾಂಕ್‌ನಲ್ಲಿ ಸ್ಥಿರ ಠೇವಣಿ ಇರಿಸಿದ್ದರು. 2019ರ ಫೆಬ್ರವರಿ 22ರಂದು ರಾಘವೇಂದ್ರ ತೀರ್ಥರು ಬ್ಯಾಂಕ್‌ಗೆ ತೆರಳಿ ಸುರತ್ಕಲ್ ಬ್ರಾಂಚ್‌ನ ಮ್ಯಾನೇಜರ್ ಅವರಲ್ಲಿ ಸ್ಥಿರ ಠೇವಣಿಯ ಬಗ್ಗೆ ವಿಚಾರಿಸಿದ್ದರು.
‘ಬ್ಯಾಂಕ್‌ನಲ್ಲಿ ಇರಿಸಲಾಗಿದ್ದ ಠೇವಣಿಯ ಮೂಲ ರಶೀದಿಯೊಂದಿಗೆ ಎಲ್ಲ ದಾಖಲೆಗಳ ಸಮೇತ ಕಾಶಿಮಠದ ಸಮ್ಯಾಮಿಂದ್ರತೀರ್ಥ ಅವರ ಹೆಸರಲ್ಲಿ ನವೀಕೃತಗೊಳಿಸಲಾಗಿದೆ’ ಎಂದು ಬ್ರಾಂಚ್‌ನ ಮ್ಯಾನೇಜರ್ ಮಾ.5ರಂದು ರಾಘವೇಂದ್ರತೀರ್ಥ ಅವರಿಗೆ ಲಿಖಿತವಾಗಿ ತಿಳಿಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ಕಾಶಿಮಠದ ಸಮ್ಯಾಮಿಂದ್ರತೀರ್ಥ ಶ್ರೀಗಳು ರಾಘವೇಂದ್ರತೀರ್ಥರಿಗೆ ವಂಚಿಸುವ ಉದ್ದೇಶದಿಂದ ತನಗೆ ಸೇರಿದ ಸ್ಥಿರ ಠೇವಣಿಯನ್ನು ಸುರತ್ಕಲ್ ಇಡ್ಯಾ ಗ್ರಾಮದ ಕರ್ನಾಟಕ ಬ್ಯಾಂಕ್‌ನ ಆರ್‌ಇಪಿ (ರೆಪ್) ಮ್ಯಾನೇಜರ್ ಹಾಗೂ ಸುರತ್ಕಲ್ ಬ್ರಾಂಚ್‌ನ ಮ್ಯಾನೇಜರ್ ಸಹಕಾರದಿಂದ ಮಠದ ಪರವಾಗಿ ಅವರ ಹೆಸರಿಗೆ ವರ್ಗಾಯಿಸಲಾಗಿದೆ. ತನಗೆ ಸೇರಬೇಕಾದ 40 ಲಕ್ಷ ರೂ. ಮೋಸದಿಂದ ಲಪಟಾಯಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಆಸ್ತಿಯ ದುರ್ಬಳಕೆ (403), ನಂಬಿಕೆ ದ್ರೋಹ (406), ಮೋಸ (420), ಸಂಘಟಿತ ಮೋಸ ಕೃತ್ಯ (34) ಸೆಕ್ಷನ್‌ಗಳಲ್ಲಿ ದೂರು ದಾಖಲಾಗಿದೆ.
ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.