×
Ad

ಪಲಿಮಾರು ಮಠದ ನೂತನ ಯತಿಗೆ ಅಭಿನಂದನಾ ಸಭೆ

Update: 2019-05-12 21:45 IST

ಉಡುಪಿ, ಮೇ 12: ಉನ್ನತ ಪರಂಪರೆ ಹೊಂದಿರುವ ಪಲಿಮಾರು ಮಠದ ಉತ್ತರಾಧಿಕಾರಿ ಯಾಗಿರುವ ನೂತನ ಯತಿಗಳು ಮುಂದೆ ಪರಮ ಗುರು ವಿದ್ಯಾಮಾನ್ಯರು ಹಾಗೂ ಗುರು ವಿದ್ಯಾಧೀಶ ತೀರ್ಥರಂತೆ ನಿರಂತರ ಜ್ಞಾನ ಪ್ರಸಾರ ಕಾರ್ಯ ಮಾಡಲಿ ಎಂದು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ಪಲಿಮಾರು ಮಠದ ನೂತನ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಅವರಿಗೆ ಅಭಿ ನಂದನಾ ಸಭೆಯಲ್ಲಿ ಅವರು ಮಾತನಾಡಿದರು.

ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಮಾತನಾಡಿ, ಮಠದ ಪರಂಪರೆಯ 30 ಸ್ವಾಮೀಜಿಗಳ ಹೆಸರಿನ ಅಕ್ಷರಗಳನ್ನು ಸೇರಿಸಿ ಶ್ರೀವಿದ್ಯಾರಾಜೇಶ್ವರ ತೀರ್ಥ ಎಂದು ನೂತನ ಶಿಷ್ಯನಿಗೆ ನಾಮಕರಣ ಮಾಡಲಾಗಿದೆ. ಪರಂಪರೆಯ ಎಲ್ಲಾ ಶ್ರೀಗಳ ಸನ್ನಿಧಾನ ಅವರಲ್ಲಿ ಸೇರಿಕೊಂಡು ಸಮಾಜಕ್ಕೆ ಉತ್ತಮ ಮಾರ್ಗದರ್ಶಕರಾಗಲಿ ಎಂಬ ದ್ಯೇಯ ಅದರಲ್ಲಿದೆ ಎಂದು ತಿಳಿಸಿದರು.

ಪಲಿಮಾರು ನೂತನ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಮಾತ ನಾಡಿ, ರಾಮ ಮತ್ತು ಕೃಷ್ಣ ದೇವರ ಪೂಜೆ ಆಸೆ ಮನಸ್ಸಿನಲ್ಲಿದ್ದ ಕಾರಣಕ್ಕೆ ಸನ್ಯಾಸ ಯೋಗ ಲಭಿಸಿದೆ. ಪಲಿಮಾರು ಮಠದ ಮೂಲಕ ದೇವರು ಅದನ್ನು ದೊರಕಿಸಿ ಕೊಟ್ಟಿದ್ದಾನೆ. ಹೃಷೀಕೇಶ ತೀರ್ಥರ ಪರಂಪರೆಯಲ್ಲಿ ಸನ್ಯಾಸ ಪಡೆಯುವುದು ಗುರು ಮತ್ತು ದೇವರ ಅನುಗ್ರಹದಿಂದ ಮಾತ್ರ ಸಾಧ್ಯ ಎಂದರು.

ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಾತನಾಡಿ, ಸನ್ಯಾಸಿಗಳಿಗೆ ಸಮಾಜದ ಎಲ್ಲಾ ವರ್ಗಗಳ ಸಹಕಾರ ಅಗತ್ಯ ಎಂದರು. ಮಠದ ದಿವಾನರಾದ ವೇದವ್ಯಾಸ ತಂತ್ರಿ ಮಾಲಿಕೆ ಮಂಗಳಾರತಿ ಮೂಲಕ ಸ್ವಾಮೀಜಿ ಗಳಿಗೆ ಗೌರವಾರ್ಪಣೆ ಸಲ್ಲಿಸಿದರು.

 ಅದಮಾರು ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಸೋದೆ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ, ಭೀಮನಕಟ್ಟೆ ಮಠಾಧೀಶ ಶ್ರೀರಘುವರೇಂದ್ರ ತೀರ್ಥ ಸ್ವಾಮೀಜಿ, ಅದಮಾರು ಕಿರಿಯಯತಿ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News